ಮೈಸೂರು:ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಮೋಘ ಸಾಧನೆ ಮಾಡಿದ್ದು. 11 ವಿಧಾನ ಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದರಲ್ಲಿ ಹಿರಿಯ ಅನುಭವಿ ಹಾಗೂ ಯುವ ಶಾಸಕರು ಸೇರಿದ್ದು. ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ. ಯಾರ್ಯಾರು ಆಕಾಂಕ್ಷಿಗಳಿದ್ದಾರೆ ಎಂಬುದರ ಕುರಿತು ವಿವರಣೆ ಇಲ್ಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ನಾಳೆ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಆಗಿ ಡಿ ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದು. ಅವರೊಂದಿಗೆ ಮೈಸೂರು ಜಿಲ್ಲೆಯಿಂದ ಯಾರು ಮಂತ್ರಿಯಾಗುತ್ತಾರೆ. ಯಾರ್ಯಾರು ಈ ರೇಸ್ ನಲ್ಲಿ ಇದ್ದಾರೆ ಎಂಬ ಚರ್ಚೆ ಈಗ ಶುರುವಾಗಿದೆ.
ಮೈಸೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಇದರಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ. ಈಗ ಆರನೇ ಬಾರಿಗೆ ಗೆದ್ದಿರುವ ಟಿ.ನರಸೀಪುರ ಕ್ಷೇತ್ರದ ಡಾ ಎಚ್ ಸಿ ಮಹಾದೇವಪ್ಪ, ಪಿರಿಯಾಪಟ್ಟಣದ ಕೆ.ವೆಂಕಟೇಶ್ ಹಾಗೂ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಹಿರಿಯ ಶಾಸಕರಾಗಿದ್ದು, ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಇವರೊಂದಿಗೆ ಎರಡನೇ ಬಾರಿ ಗೆದ್ದಿರುವ ಎಚ್ ಡಿ.ಕೋಟೆಯ ಅನಿಲ್ ಚಿಕ್ಕಮಾದು, ಮೊದಲ ಬಾರಿಗೆ ಆಯ್ಕೆಯಾಗಿರುವ ನಂಜನಗೂಡಿನ ದರ್ಶನ್ ದೃವನಾರಾಯಣ್, ಕೆ ಆರ್.ನಗರದ ರವಿ ಶಂಕರ್ ಹಾಗೂ ಚಾಮರಾಜ ಕ್ಷೇತ್ರದ ಹರೀಶ್ ಗೌಡ ಯುವ ಶಾಸಕರಿಗೆ ಅದೃಷ್ಟ ಖುಲಾಯಿಸಿದರೆ ಮಂತ್ರಿಯಾಗುವ ಯೋಗವೂ ಇದೆ ಎಂಬ ಚರ್ಚೆಯೂ ಇದೆ.