ಮೈಸೂರು:ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗಿ ಪ್ರಚಾರ ಮಾಡಿದ್ದರೋ ಅಲ್ಲೆಲ್ಲ ಕಮಲ ಅರಳಿದೆ. ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಮಾಡಲು ಬಂದರೆ ಇಲ್ಲೂ ಸಹ ಕಮಲ ಅರಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ನಡೆಯಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಗಲು ಮೈಸೂರಿಗೆ ಬಂದಿದ್ದೇನೆ. ನಾಡಿನ ಸಮಸ್ತ ಜನರಿಗೆ ದಸರಾ ಹಬ್ಬದ ಶುಭಾಶಯಗಳು. ದಸರಾ ಹಬ್ಬದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ರಾಹುಲ್ ಗಾಂಧಿ ಬಂದ ಕಡೆ ಕಮಲ ಅರಳುತ್ತದೆ.. ನಮಗೆ ನಷ್ಟ ಇಲ್ಲ: ಸಿಎಂ ಬೊಮ್ಮಾಯಿ ಇದೇ ವೇಳೆ ಕಾಂಗ್ರೆಸ್ನ ಪೇಸಿಎಂ ಅಭಿಯಾನ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಸರಣಿ ಹಗರಣಗಳಾಗಿವೆ. ಅವರು ಈ ರೀತಿ ಪ್ರಚಾರ ಮಾಡಿಕೊಂಡು ಹೋಗಲಿ. ಡರ್ಟಿ ಪಾಲಿಟಿಕ್ಸ್ನಿಂದಲೇ ಕಾಂಗ್ರೆಸ್ ಅಧಃಪತನದತ್ತ ಸಾಗುತ್ತಿದೆ. ರಾಜ್ಯದ ಮರ್ಯಾದೆಯನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ ಎಂದು ಟೀಕಿಸಿದರು.
ಚುನಾವಣಾ ವರ್ಷವಾದ್ದರಿಂದ ಇವೆಲ್ಲಾ ಸರ್ವೇ ಸಾಮಾನ್ಯ. ವೈಯಕ್ತಿಕ ಟೀಕೆಗಳಿಗೆ ನಾನು ಹೆದರುವುದಿಲ್ಲ. ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಅಭಿಯಾನ ಆಗಮಿಸುತ್ತಿದ್ದು, ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಬಂದು ಹೋದರೆ ನಮಗೆ ನಷ್ಟ ಹಾಗೂ ತೊಂದರೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಕನ್ನಡಿಗರು ಎಲ್ಲರನ್ನೂ ನಮ್ಮವರೆಂದು ಒಪ್ಪಿಕೊಳ್ತಾರೆ: ಸಿಎಂ ಬೊಮ್ಮಾಯಿ