ಮೈಸೂರು :ಕಳೆದ ಮೂರು ತಿಂಗಳಿಂದ ಪ್ರತಿದಿನ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಚಿನ್ನದ ದರ ಹೆಚ್ಚಳವಾಗಲು ಕಾರಣಗಳೇನು, ಯಾವಾಗ ಚಿನ್ನದ ದರ ಕಡಿಮೆ ಆಗಬಹುದು ಎಂಬುದರ ಬಗ್ಗೆ ಮೈಸೂರು ನಗರದ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಅಮರ್ನಾಥ್ ಅವರು, 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಭಾರತದಲ್ಲಿ ಶುಭ ಸಮಾರಂಭ ಮಾಡಲು ಕನಿಷ್ಠ ಅಂದರು ಒಂದು ಗ್ರಾಂ ಆದರೂ ಚಿನ್ನದ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಆದರೆ, ಪ್ರಸ್ತುತ ಪ್ರತಿನಿತ್ಯ ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಸರ್ಟಿನಿಟಿ ಹೆಚ್ಚಾಗಿರುವುದು ಒಂದು ಕಾರಣವಾದರೆ. ಮತ್ತೊಂದು ಬಹುಮುಖ್ಯ ಕಾರಣ ಉಕ್ರೇನ್ ಮತ್ತು ರಷ್ಯಾ ನಡುವಿನ ಸುಧೀರ್ಘ ಯುದ್ಧ. ಮುಖ್ಯವಾಗಿ ಅಮೆರಿಕದ ಪ್ರತಿಷ್ಠಿತ ಮೂರು ಬ್ಯಾಂಕ್ಗಳು ನಷ್ಟ ಅನುಭವಿಸಿರುವುದು. ಈಗ ಜನರು ಡಾಲರ್ ಮೇಲಿನ ಹೂಡಿಕೆಗಿಂತ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಮಾಡುತ್ತಿರುವುದು ಸಹ ಚಿನ್ನದ ಬೆಲೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂದು ಅಮರ್ನಾಥ್ ಹೇಳಿದರು.
ಉದಾಹರಣೆಗೆ ರಷ್ಯಾ ದೇಶಕ್ಕೆ ಡಾಲರ್ ನಿರ್ಬಂಧ ಹಾಕಿದರು. ಇದರಿಂದ ಸ್ವಿಫ್ಟ್ ರಿಸರ್ವ್ ಮಾಡುವ ಹಾಗಿಲ್ಲ. ಹಾಗಾಗಿ ಅಮೆರಿಕದಲ್ಲಿ ನಿರ್ಬಂಧ ಹೇರಲಾಗಿದೆ. ಇದರಿಂದ ಭಾರತದಲ್ಲಿ ಜನರು ಆತಂಕದಿಂದ ಮುಂದೊಂದು ದಿನ ಡಾಲರ್ ನಿರ್ಬಂಧದಿಂದ ಸಮಸ್ಯೆ ಉಂಟಾಗಿ ನಷ್ಟವಾಗಬಹುದು ಎಂದು ತಿಳಿದು ಎಲ್ಲರೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಎಂದರು.