ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ನ್ನು ನಾಳೆ ಶುಕ್ರವಾರ ಮಂಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ 14ನೇ ಬಜೆಟ್ನ್ನು ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತವರು ಜಿಲ್ಲೆ ಮೈಸೂರಿನ ನಿರೀಕ್ಷೆಗಳೇನು? ಏನೆಲ್ಲಾ ಸಿಗಲಿದೆ ಎಂಬ ಕುತೂಹಲ ತವರು ಜಿಲ್ಲೆಯ ಜನರಿಗಿದೆ.
ಪಾರಂಪರಿಕ ಹಾಗೂ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರು ವಾಸಿಯಾಗಿರುವ ಮೈಸೂರಿಗೆ ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷೆಗಳು ಹೆಚ್ಚಿದೆ. ಈ ನಡುವೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಗ್ಯಾರಂಟಿ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗಲಿದೆ. ಉಳಿದ ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬುದೇ ಯಕ್ಷಪ್ರಶ್ನೆ ಆಗಿದೆ. ಬೆಂಗಳೂರನ್ನು ಬಿಟ್ಟರೆ ಎರಡನೇ ರಾಜಧಾನಿಯೆಂದೇ ಹೆಸರುವಾಸಿಯಾಗಿರುವ, ಸಿಎಂ ತವರು ಜಿಲ್ಲೆ ಮೈಸೂರಿಗೆ ಬಂಪರ್ ಸಿಗಬಹುದೇ? ಮೈಸೂರಿನ ಪ್ರಮುಖ ನಿರೀಕ್ಷೆಗಳೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಮೈಸೂರು ನಗರದ ನಿರೀಕ್ಷೆಗಳೇನು?:ಪಾರಂಪರಿಕ ನಗರಿ ಮೈಸೂರಿಗೆ ಈ ಬಾರಿ ಬಜೆಟ್‌ನಲ್ಲಿ ತನ್ನದೇ ಆದಂತಹ ಕೆಲವು ಪ್ರಮುಖ ನಿರೀಕ್ಷೆಗಳನ್ನು ಹೊಂದಿದ್ದು, ಪ್ರಮುಖವಾಗಿ ಮೈಸೂರನ್ನು ಪಾರಂಪರಿಕ ನಗರವನ್ನಾಗಿ ಘೋಷಣೆ ಮಾಡಬೇಕು. ದಸರಾ ಪ್ರಾಧಿಕಾರದ ರಚನೆ ಆಗಬೇಕು. ಪಾರಂಪರಿಕ ಕಟ್ಟಡಗಳ ದುರಸ್ತಿಗೆ ಅನುದಾನ ನೀಡಬೇಕು. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕು. ಮೈಸೂರು ವಿವಿಗೆ ಅನುದಾನ ನೀಡಬೇಕು. ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಅನುದಾನ ನೀಡಬೇಕು. ನಗರದ ನಾಲ್ಕು ದಿಕ್ಕಿನಲ್ಲಿಯೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಆಗಬೇಕು ಎನ್ನುವ ಪ್ರಮುಖ ಬೇಡಿಕೆಗಳಿವೆ.
ಜೊತೆಗೆ ಸಿಎಂ ಅವರ ಸ್ವಕ್ಷೇತ್ರವಾದ ಹಿಮ್ಮಾವು ಬಳಿ ಚಿತ್ರನಗರಿ ನಿರ್ಮಾಣಕ್ಕೂ ಸಹ ಈ ಬಜೆಟ್‌ನಲ್ಲಿ ಅನುದಾನ ಘೋಷಣೆ ಆಗುವ ನಿರೀಕ್ಷೆಯಿದೆ. ಬೃಹತ್ ಮೈಸೂರು ಪಾಲಿಕೆಯಾಗಿ ರಚನೆ ಮಾಡಬೇಕು. ಮೈಸೂರಿಗೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಬೇಕು. ಸುಸಜ್ಜಿತ ಬಸ್ ನಿಲ್ದಾಣವನ್ನು ಸಹ ನಿರ್ಮಿಸಬೇಕೆಂದು ನಿರೀಕ್ಷೆಗಳಿವೆ.
ಜಿಲ್ಲೆಯ ತಾಲೂಕುಗಳ ನಿರೀಕ್ಷೆಗಳೇನು?:ಪ್ರಮುಖವಾಗಿ ಹುಣಸೂರು ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲು ಅನುದಾನ ನೀಡಬೇಕು. ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಗೆ 10 ಕೋಟಿ ರೂ. ಅನುದಾನ ನೀಡಬೇಕು. ಲಕ್ಷ್ಮಣತೀರ್ಥ ನದಿ ಶುದ್ದಿಕರಣ ಮಾಡಲು ಅನುದಾನ ನೀಡಬೇಕು. ಕೆ.ಆರ್. ನಗರದಲ್ಲಿ ಹೊಸ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಯಡತೊರೆಯನ್ನ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಬೇಕು. ಕೈಗಾರಿಕಾ, ವೈಧ್ಯಕೀಯ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡಲು ಅನುದಾನದ ಲಭಿಸುವ ನಿರೀಕ್ಷೆಯಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಅಭಿವೃದ್ಧಿಗೆ ಅನುದಾನ, ಯಡಿಯಾಲದ ಕೆರೆಗಳಿಗೆ ನೀರು ತುಂಬಿಸಲು, ಒಳಚರಂಡಿ ಕಾಮಗಾರಿ ಪೂರ್ಣ ಮಾಡಲು ಅನುದಾನದ ಲಭಿಸುವ ಸಾಧ್ಯತೆಯಿದೆ.
ಜೊತೆಗೆ ಟಿ.ನರಸೀಪುರ ತಾಲ್ಲೂಕಿಗೆ ಸುಸಜ್ಜಿತ ಕ್ರೀಡಾಂಗಣ ಅನುದಾನ ಬೇಕಿದೆ. ಸರ್ಕಾರಿ ಬಸ್ ಡಿಪೋ ನಿರ್ಮಾಣ, ಹಳ್ಳಿಗಳಿಗೆ ಬಸ್ ಸೌಲಭ್ಯ, ತಲಕಾಡು, ಸೋಮನಾಥಪುರ, ತಿ.ನರಸೀಪುರ ಪ್ರವಾಸೋದ್ಯಮ ಸರ್ಕ್ಯೂಟ್ ರಚನೆಗೆ ಮತ್ತು ನಾಲೆಗಳ ಅಭಿವೃದ್ಧಿಗೆ ಅನುದಾನದ ನಿರೀಕ್ಷೆಯಿದೆ. ಸರಗೂರು ತಾಲ್ಲೂಕಿಗೆ ನೂತನ ತಾಲ್ಲೂಕು ಕೇಂದ್ರದ ಅವಶ್ಯಕತೆಯಿದೆ. ಜಯಚಾಮರಾಜೇಂದ್ರ ಕ್ರಿಡಾಂಗಣ ಅಭಿವೃದ್ಧಿ, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಅನುದಾನ ಹಾಗೂ ಪಿರಿಯಾಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು, ಪ್ರತ್ಯೇಕ ಹೇರಿಗೆ ಆಸ್ಪತ್ರೆ, ಕೆರೆಗಳಿಗೆ ನೀರು ತುಂಬಿಸಲು ಅನುದಾನ ದೊರೆಯುವ ಸಾಧ್ಯತೆಯಿದೆ.
ಬಜೆಟ್ ನಿರೀಕ್ಷೆಗಳ ಗಣ್ಯರು ಹೇಳುವುದೇನು?:
- ಪಾರಂಪರಿಕ ನಗರಿ ಮೈಸೂರಿನಲ್ಲಿ 60 ರಿಂದ 70 ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಇವುಗಳನ್ನು ಪುನಶ್ಚೇತನಗೊಳಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎನ್ನತ್ತಾರೆ ಪಾರಂಪರಿಕ ತಜ್ಞ ಪ್ರೊ.ರಂಗರಾಜು.
- ಪ್ರವಾಸಿಗರ ನಗರಿ ಮೈಸೂರು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುವ ನಗರವಾಗಿದ್ದು, ಈ ನಗರಕ್ಕೆ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಹಾಗೂ ದಸರಾವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಶಾಶ್ವತ ದಸರಾ ಪ್ರಾಧಿಕಾರ ರಚನೆ ಮಾಡಬೇಕು. ಹಿಮ್ಮಾವಿನ ಬಳಿ ಚಿತ್ರನಗರಿ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಅಂತಾರಾಜ್ಯ ಪ್ರವಾಸಿ ವಾಹನಗಳ ತೆರಿಗೆಯಲ್ಲಿ ರಿಯಾಯಿತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ನೀಡಬೇಕು ಎಂದು ಮೈಸೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
- ಮೈಸೂರು ಕೈಗಾರಿಕಾ ಸಂಘಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಅವರು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 50 ಸಾವಿರ ವಿವಿಧ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ 10 ಲಕ್ಷ ಜನ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಅವಲಂಬಿತರಾಗಿದ್ದು, ಅವರ ಅನುಕೂಲಕ್ಕಾಗಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಬೇಕು. ಮೈಸೂರಿನಲ್ಲಿ ರಫ್ತು ಕೇಂದ್ರ ಸ್ಥಾಪನೆಗೆ ಈ ಬಜೆಟ್ ನಲ್ಲಿ ಹಣ ನೀಡಬೇಕು. ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
- ಈ ಬಾರಿಯ ಬಜೆಟ್‌ನಲ್ಲಿ ರೈತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಅನ್ನ ಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ರಾಗಿ, ಅಕ್ಕಿ, ಜೋಳವನ್ನು ಹಾಗೂ ಸಿರಿಧಾನ್ಯಗಳನ್ನ ಖರೀದಿ ಮಾಡಬೇಕು. ಇದಕ್ಕೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಎಂದು ರಾಜ್ಯ ರೈತ ಸಂಘದ ಒಕ್ಕೂಟಗಳ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ಜೊತೆಗೆ ಈ ಬಜೆಟ್‌ನಲ್ಲಿ ರೈತರ 12 ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹೆಚ್ಚು ಸಾಲ ಮಾಡದೆ, ಜನರ ಮೇಲೆ ತೆರಿಗೆ ಭಾರ ಹಾಕದೇ, ಗ್ಯಾರಂಟಿಗಳನ್ನ ಜಾರಿ ಮಾಡಿ:ಬೊಮ್ಮಾಯಿ ಸಲಹೆ