ಮೈಸೂರು:ಹುಣಸೂರು ಉಪ ಚುನಾವಣೆಯ ಮತ ಎಣಿಕೆಗೆ 14 ಎಣಿಕೆ ಟೇಬಲ್ ಸ್ಥಾಪಿಸಿದ್ದು, 19 ರಿಂದ 20 ಸುತ್ತಿನಲ್ಲಿ ಮತ ಎಣಿಕೆ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಸೋಮವಾರ ನಡೆಯಲಿರುವ ಹುಣಸೂರು ಉಪ ಚುನಾವಣೆಯ ಮತ ಎಣಿಕೆಗೆ 14 ಟೇಬಲ್ಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ಟೇಬಲ್ಗೆ 1 ಮೈಕ್ರೋ ಅಬ್ಸರ್ವರ್, ಒಬ್ಬ ಸೂಪರ್ ವೈಸರ್, ಒಬ್ಬರು ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. 19 ರಿಂದ 20 ಸುತ್ತು ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುವುದು. ನಂತರ ಇತರೆ ಮತ ಎಣಿಕೆ ನಡೆಯಲಿದ್ದು, 12 ಗಂಟೆಯೊಳಗೆ ಫಲಿತಾಂಶ ಪ್ರಕಟವಾಗಲಿದೆಯೆಂದರು.
ಹುಣಸೂರು ಉಪ ಚುನಾವಣೆ ಮತ ಎಣಿಕೆಗೆ ಸರ್ವ ಸಿದ್ಧತೆ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಈ ಹಿನ್ನೆಲೆಯಲ್ಲಿ ಡಿಸೆಂಬರ್ 8ರ ಮಧ್ಯರಾತ್ರಿಯಿಂದ ಡಿಸೆಂಬರ್ 9ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಹೇರಲಾಗಿದ್ದು, ಅಗತ್ಯಬಿದ್ದರೆ ಅದನ್ನು ವಿಸ್ತರಿಸಲಾಗುವುದೆಂದರು. ಮತ ಎಣಿಕೆಯ ಕೊಠಡಿಯೊಳಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಮಾಧ್ಯಮಗಳ ಕೊಠಡಿಯೊಳಗೆ ಮೊಬೈಲ್ ಬಳಕೆ ಇದೆ ಎಂದರು. ಅಭ್ಯರ್ಥಿ ಸೂಚಿಸುವ 5 ಸುತ್ತಿನ ವಿವಿ ಪ್ಯಾಡ್ ಎಣಿಕೆಯ ನಂತರ ಫಲಿತಾಂಶವನ್ನು ಘೋಷಣೆ ಮಾಡಲಾಗುವುದೆಂದು ಮಾಹಿತಿ ನೀಡಿದರು.
ಮತದಾನದ ದಿನ ಮಾಧ್ಯಮಗಳಲ್ಲಿ ಹಣ ಹಂಚಿಕೆಯ ವಿಡಿಯೋ ಪ್ರಕಟವಾದ ಹಿನ್ನಲೆಯಲ್ಲಿ ಅಂದು ಪ್ರಸಾರವಾದ ವಿಡಿಯೋವನ್ನು ಸಂಪೂರ್ಣವಾಗಿ ನೀಡುವಂತೆ ಕೇಳಿದ್ದೇವೆ ಎಂದರು. ಹುಣಸೂರು ಉಪ ಚುನಾವಣೆ ಕ್ಷೇತ್ರದಲ್ಲಿ 87 ಅಂಚೆ ಮತಗಳಿದ್ದವು, ಅದರಲ್ಲಿ ಇಲ್ಲಿಯವರೆಗೆ 20 ಅಂಚೆ ಮತಗಳು ಬಂದಿದ್ದು ಉಳಿದ ಅಂಚೆ ಮತಗಳು ಬರಲು ಇನ್ನೂ ಕಾಲಾವಕಾಶ ಇದೆ ಎಂದರು.