ಮೈಸೂರು :ಎಲ್ಲಾ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ಇದೆ. ಆದ್ರೆ, ಜನರು ಹೊರಗೆ ಮಾತ್ರ ಬರುವಂತಿಲ್ಲ. ಹಾಗಿದ್ದರೆ, ಯಾರಿಗಾಗಿ ವ್ಯಾಪಾರಸ್ಥರು ಅಂಗಡಿಗಳನ್ನ ತೆಗೆಯಬೇಕು. ಇದು ಎಂತಹ ಆದೇಶ. ಇದು ಹುಚ್ಚರು ನೀಡುವ ಆದೇಶವಾಗಿದೆ. ಕೂಡಲೇ ವೀಕೆಂಡ್ ಕರ್ಫ್ಯೂ ತೆಗೆದು ಹಾಕಿ ಎಂದು ತಮ್ಮ ಸರ್ಕಾರದ ವಿರುದ್ಧವೇ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೈಟ್ ಮತ್ತು ವೀಕೆಂಡ್ ಕರ್ಫ್ಯೂವನ್ನು ಯಾರಿಗಾಗಿ ಮಾಡಿದ್ದಾರೆ. ಬೀದಿಬದಿ ವ್ಯಾಪಾರಕ್ಕೆ, ದಿನಸಿ ಅಂಗಡಿ, ತರಕಾರಿ ಇತರೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಜನರು ಮಾತ್ರ ಹೊರಗೆ ಬರುವಂತಿಲ್ಲ ಎಂದು ಆದೇಶ ನೀಡಿದ್ದಾರೆ.
ಇದು ಎಂತಹ ಆದೇಶ, ಹುಚ್ಚರು ಈ ರೀತಿ ಆದೇಶ ಮಾಡುತ್ತಾರೆ. ನಿಮಗೆ ಹೇಳುವವರು, ಕೇಳುವವರು ಯಾರು ಇಲ್ವಾ?, ಜನರನ್ನ ಗಾಬರಿಗೊಳಿಸಬೇಡಿ. ಮೊದಲೆರಡು ಅಲೆಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಮೂರನೇ ಅಲೆ ತೀವ್ರತೆ ಕಡಿಮೆ ಇದ್ದು, ಕೂಡಲೇ ನೈಟ್ ಮತ್ತು ವೀಕೆಂಡ್ ಕರ್ಫ್ಯೂವನ್ನು ತೆಗೆಯಿರಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋವಿಡ್ ಹೆಸರಿನಲ್ಲಿ ದುಡ್ಡು ಮಾಡಿದ್ದು ಸಾಕು :ಕೋವಿಡ್ ಹೆಸರಿನಲ್ಲಿ ಕೆಲವು ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ದುಡ್ಡು ಮಾಡಿದ್ದು ಸಾಕು. ಮತ್ತೆ ಅದನ್ನೇ ಮಾಡಬೇಡಿ. ಈಗಾಗಲೇ ಜನರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಫಾರ್ಮಸಿಟಿಕಲ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ.