ಮೈಸೂರು : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಹನುಮ ಜನ್ಮಸ್ಥಳ ಅಭಿವೃದ್ಧಿ ಮಾಡುತ್ತೇವೆ. ನಾವು ಕೂಡ ಹನುಮ ಭಕ್ತರು. ದೇವರ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು ಕಾನೂನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಷ್ಟೇ ನಾವು ಹೇಳಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ಚಾಮುಂಡಿ ತಾಯಿಯ ದರ್ಶನ ಪಡೆದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಿಜೆಪಿಯವರು ಈ ವಿಚಾರವನ್ನು ಮುಂದಿಟ್ಟುಕೊಂಡು ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಮುಂದಾಗಿದ್ದಾರೆ ಎಂದು ತಿಳಿಸಿದರು. ನಮ್ಮ ನಾಡ ದೇವತೆ ಚಾಂಮುಂಡೇಶ್ವರಿ ರಾಜ್ಯಕ್ಕೆ ಬಂದಿರುವ ದುಃಖವನ್ನು ದೂರ ಮಾಡುವ ದುರ್ಗಾದೇವಿ. ಚುನಾವಣೆ ಪ್ರಚಾರದ ವೇಳೆ ಮತಯಾಚನೆ ವೇಳೆ ತಾಯಿ ದರ್ಶನ ಪಡೆದು ನಮ್ಮ ಸಂಕಷ್ಟಗಳು ಬಗೆಹರಿದು ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಆರಂಭದಲ್ಲಿ ಗಣೇಶ, ತಾಯಿ ಚಾಮುಂಡೇಶ್ವರಿ ಹಾಗೂ ಆಂಜನೇಯನ ಬಳಿ ಪ್ರಾರ್ಥನೆ ಮಾಡಿ ಪ್ರಚಾರಕ್ಕೆ ಹೊರಟಿದ್ದೇನೆ. ಯಶಸ್ಸು ಖಂಡಿತವಾಗಿಯೂ ಸಿಗಲಿದೆ ಎಂದು ನಂಬಿದ್ದೇನೆ ಎಂದರು.
ಬಜರಂಗದಳ ವಿಚಾರ ನಿಮ್ಮ ಚುನಾವಣೆ ಪ್ರಚಾರದ ವೇಗಕ್ಕೆ ಬ್ರೇಕ್ ಹಾಕಿದೆಯೇ ಎಂಬ ಪ್ರಶ್ನೆಗೆ, ‘ನಮ್ಮ ಪ್ರಣಾಳಿಕೆ ಕಂಡು ಬಿಜೆಪಿಯವರು ಗಾಬರಿಯಾಗಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಬಜರಂಗದಳ ಒಂದು ಸಂಘಟನೆ. ಹುಟ್ಟಿದ ಕರುಗಳೆಲ್ಲಾ ಬಸವ ಆಗುವುದಿಲ್ಲ, ಅದೇ ರೀತಿ ಆಂಜನೇಯನ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಹನುಮಂತನಾಗುತ್ತಾರೆಯೇ. ಅವರು ಹನುಮಂತನ ಹೆಸರಿಟ್ಟುಕೊಂಡು ಸಂಘಟನೆ ಮಾಡಿ ನೈತಿಕ ಪೊಲೀಸ್ ಗಿರಿ ಮಾಡಿಕೊಂಡು ಬಂದಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.