ಮೈಸೂರು: ಹಾನಗಲ್ ಮತ್ತು ಸಿಂದಗಿ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಈ ಚುನಾವಣೆ 2023ರ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇದು ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆ. ಇದನ್ನು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ತೆಗೆದುಕೊಳ್ಳಬಾರದು. 2023ರಲ್ಲಿ ನಡೆಯುವ ಚುನಾವಣೆ ನಮ್ಮ 17 ಜನರಿಗೂ ವಿಶೇಷವಾಗೇನಿಲ್ಲ. ನಾವು ಬೇರೆ ಪಕ್ಷದಿಂದ ಬಂದು ಗೆದ್ದು, ಮಂತ್ರಿಗಳಾಗಿದ್ದೇವೆ. ಅದರಂತೆ ಮುಂದಿನ ಚುನಾವಣೆಯೂ ನಡೆಯಲಿದ್ದು, ಗೆಲುವು- ಸೋಲು ಸಾಮಾನ್ಯ. ಅಂದು ಯಾವ ವಾತಾವರಣ ಇರುತ್ತೋ ಅದರಂತೆ ಚುನಾವಣೆ ನಡೆಯಲಿದೆ ಎಂದರು.
ಮಂಡ್ಯದ ಮೈಮುಲ್ನಲ್ಲಿ 1 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂಬ ಮಾಜಿ ಸಚಿವ ಚೆಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಂದು ಸಾವಿರ ಕೋಟಿ ಹಗರಣ ನಡೆದಿಲ್ಲ. ಹಾಲಿಗೆ ನೀರು ಮಿಕ್ಸ್ ಮಾಡುತ್ತಾರೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಿಒಡಿ ತನಿಖೆಗೆ ಆದೇಶಿಸಿದ್ದರು. ಅದರಂತೆ ಮೂರ್ನಾಲ್ಕು ದಿನಗಳಲ್ಲಿ ಸಿಒಡಿ ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತದೆ. ಜೊತೆಗೆ ಸಹಕಾರ ಇಲಾಖೆಯವರೂ ಕೂಡಾ ತನಿಖೆ ಮಾಡುತ್ತಿದ್ದು, ಅವರು ಕೂಡಾ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಎರಡು ವರದಿಯನ್ನು ಇಟ್ಟುಕೊಂಡು ವಿಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.