ಕರ್ನಾಟಕ

karnataka

ETV Bharat / state

ತಿನ್ನುವ ಹಕ್ಕು ನಮಗಿದೆ, ಬಿಸಾಡುವ ಹಕ್ಕಿಲ್ಲ: ದಸರಾ ಆಹಾರ ಮೇಳದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ - ಈಟಿವಿ ಭಾರತ್ ಕನ್ನಡ ಸುದ್ದಿ

ಆಹಾರವನ್ನು ಯಾರೂ ಕೂಡಾ ವ್ಯರ್ಥ ಮಾಡಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಹೆಚ್ ಮುನಿಯಪ್ಪ
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್.ಮುನಿಯಪ್ಪ

By ETV Bharat Karnataka Team

Published : Oct 15, 2023, 3:49 PM IST

ಮೈಸೂರು: "ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ವ್ಯರ್ಥವಾಗುತ್ತಿದೆ. ನಮಗೆ ತಿನ್ನುವ ಹಕ್ಕಿದೆ, ಆದರೆ ಬಿಸಾಡುವ ಹಕ್ಕಿಲ್ಲ. ಆಹಾರವನ್ನು ವ್ಯರ್ಥ ಮಾಡಬೇಡಿ" ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಸ್ಕೌಟ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಸರಾ ಆಹಾರ ಮೇಳ ಕಾರ್ಯಕ್ರಮವನ್ನು ಹಾಲು ಉಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ಇಂದು ಆಹಾರ ಮೇಳದಲ್ಲಿ 150 ಮಳಿಗೆಗಳನ್ನು ತೆರೆಯಲಾಗಿದೆ. ಆಹಾರವನ್ನು ಯಾರೂ ಕೂಡ ವ್ಯರ್ಥ ಮಾಡಬಾರದು. ಉಪಯುಕ್ತರು ಆಹಾರ ಬಳಸಿಕೊಳ್ಳಿ. ಹೆಚ್ಚಿನ ರೀತಿ ಆಹಾರ ಪೋಲಾಗುವುದನ್ನು ತಪ್ಪಿಸಿ" ಎಂದರು.

"ಮದುವೆ ಮನೆಗಳು ಮತ್ತು ಶುಭ ಸಮಾರಂಭಗಳಲ್ಲಿ ಹಾಗೂ ಕೆಲವು ಹೋಟೆಲ್​ಗಳಲ್ಲಿ ಆಹಾರ ವ್ಯರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥವಾಗದಂತೆ ಸರ್ಕಾರದಿಂದ ನಿಯಮಾವಳಿಗಳನ್ನು ರೂಪಿಸಿ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ, ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಮತ್ತು ಪ್ರಮುಖರು ಭಾಗವಹಿಸಿದ್ದರು.

ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ: "ಜನರ ನಂಬಿಕೆಯನ್ನು ಗೌರವಿಸಿ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಧಾರ್ಮಿಕ, ವೈಚಾರಿಕ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಈ ಮೂಲಕ ಎಲ್ಲ ಜನರನ್ನು ಒಂದೆಡೆ ಸೇರಿಸಿ ಸೌಹಾರ್ದತೆ ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲಾಗುವುದು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, "ಜನತೆಗೆ ತಮ್ಮ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಲು ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ. ಅವರ ನಂಬಿಕೆ, ಅನಿಸಿಕೆ, ಆಚಾರ-ವಿಚಾರಗಳನ್ನು ನಾವೆಲ್ಲರೂ ಗೌರವಿಸಬೇಕಿದೆ. ಸ್ವತಂತ್ರರಾಗಿ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವುದರ ಮೂಲಕ ರಾಷ್ಟ್ರವನ್ನು ಬಲಿಷ್ಠವಾಗಿಸುವ ಜವಾಜ್ದಾರಿ ನಮ್ಮ ಮೇಲಿದೆ".

"ಪ್ರಕೃತಿ ನಮ್ಮ ನೆರವಿಗೆ ಬಾರದ ಕಾರಣ ಈ ಬಾರಿ ಸಾಂಪ್ರದಾಯಿಕ ದಸರಾವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ನಮ್ಮ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ಜಾನಪದ, ಕ್ರೀಡೆ ಸೇರಿದಂತೆ ಯಾವುದಕ್ಕೂ ತೊಂದರೆಯಾಗದಂತೆ ನಮ್ಮ ಸರ್ಕಾರ ಹಾಗೂ ಜಿಲ್ಲಾಡಳಿತ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ".

"ರಾಜರ ಆಡಳಿತದಲ್ಲಿ ಸಾಮ್ರಾಜ್ಯದ ವಿಸ್ತರಣೆ, ಉತ್ತಮ ಆಡಳಿತ, ಜನಪರವಾದ ನಿಲುವು ಸಾಕಾರಗೊಳಿಸಿದ್ದನ್ನು ವಿಜಯದಶಮಿ ಸಂದರ್ಭದಲ್ಲಿ ಜನರಿಗೆ ತಮ್ಮ ಸಾಧನೆಗಳನ್ನು ಹೇಳುವುದರೊಂದಿಗೆ ನಾಡಿನ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಹಾಗೂ ಆಡಳಿತ ವೈಖರಿಗಳನ್ನು ಜನರ ಮನಸ್ಸಿಗೆ ಮುಟ್ಟಿಸುವಂತಹ ಮಹತ್ತರವಾದ ಆಚರಣೆಯಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಜನರು ಕೂಡ ಸೇರಿ ಮೈಸೂರು ಸಂಸ್ಥಾನದ ಸವಿನೆನಪನ್ನು ಹಾಗೂ ಎಲ್ಲರ ಪ್ರೇರಕ ಶಕ್ತಿಯಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜರಿಗಿದ್ದ ಬದ್ಧತೆ, ಸಾಮಾಜಿಕ ಕಾಳಜಿ, ಜನಪರವಾದ ನಿಲುವು ಹಾಗೂ ಜನರ ಮೇಲಿದ್ದ ಅನುಕಂಪವು ಮೈಸೂರು ಸಂಸ್ಥಾನ ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಅದರಂತೆ ಮೈಸೂರಿನ ಜನರು ಶಾಂತಿ ಪ್ರಿಯರು. ಕಾನೂನನ್ನು ಗೌರವಿಸುವಂತಹ ಉತ್ತಮ ನಾಗರಿಕರು. ಸೌಹಾರ್ದತೆ, ಶಾಂತಿ, ಸ್ನೇಹಬದ್ಧವಾಗಿ ಬದುಕುತ್ತಿದ್ದಾರೆ".

"ನಮ್ಮ ಸರ್ಕಾರ ಸಂವಿಧಾನದ ಮಹತ್ವ ತಿಳಿಸಲು ಪ್ರತಿನಿತ್ಯ ಶಾಲಾ, ಕಾಲೇಜುಗಳಲ್ಲಿ ಬೋಧಿಸಿ, ಅರ್ಥೈಸುವಂಥ ಐತಿಹಾಸಿಕ ನಿರ್ಧಾರವನ್ನು ಮಾಡಿತು. ಅದರಂತೆ ಸೆ. 15 ವಿಶ್ವ ಪ್ರಜಾಪ್ರಭುತ್ವ ದಿನದಂದು ಸ್ವತಃ ಮುಖ್ಯಮಂತ್ರಿಗಳು ಸಂವಿಧಾನ ಬೋಧಿಸಿದರು. ಈ ಬೃಹತ್ ಕಾರ್ಯಕ್ರಮದ ಮೂಲಕ ಜಗತ್ತಿಗೆ ನಮ್ಮ ಸಂವಿಧಾನದ ಮಹತ್ವ ತಿಳಿಸಿಕೊಡಲಾಯಿತು. ಸ್ವತಂತ್ರ್ಯ ಹೋರಾಟ, ಸಂವಿಧಾನದ ಹಾಗೂ ಪ್ರಜಾಪ್ರಭುತ್ವದ ಆಶಯ ಮತ್ತು ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತವೇ ನಮಗೆ ಪ್ರೇರಣೆಯಾಗಿದೆ. ಮೈಸೂರಿನ ಒಡೆಯರ ದೂರದೃಷ್ಟಿಕೋನದಂತೆ ರಾಜ್ಯವನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧ".

"ಈ ನಡುವೆ ಎಲ್ಲಾ ರಾಜಕೀಯ ಪಕ್ಷದ ನಾಯಕರು, ಮುಖಂಡರು ತಮ್ಮ ಜಂಜಾಟವನ್ನು ಮರೆತು ದೇಶದ ಜನರನ್ನು ಈ ದಸರಾದಲ್ಲಿ ಒಗ್ಗೂಡಿಸಬೇಕಿದೆ. ಮೈಸೂರು ಸಂಸ್ಥಾನದ ನಾಗರಿಕತೆಯನ್ನು, ಸಂಸ್ಕೃತಿಯನ್ನು ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲುಪಿಸಿ ಈ ದಸರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಕೈಜೋಡಿಸಬೇಕಿದೆ".

"ವಿಜಯ ನಗರದ ಸಾಮ್ರಾಜ್ಯದ ವೈಭವ ನೆನೆಸುತ್ತಾ, ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತವನ್ನು ಸ್ಮರಿಸುವ ಮೂಲಕ ಅತ್ಯಂತ ಮಹತ್ತರವಾದ ಆಚರಣೆ ನಮ್ಮ ದಸರಾ ಮಹೋತ್ಸವವಾಗಿದೆ. ಇಂತಹ ಇತಿಹಾಸವುಳ್ಳ ದಸರಾ ಉತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಚಾಲನೆ ನೀಡಿರುವುದು ಸಂತೋಷದ ವಿಚಾರ" ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ನಾಡಹಬ್ಬದ ಮಹತ್ವ ಕಡಿಮೆಯಾಗಬಾರದೆಂದು ಸಾಂಪ್ರದಾಯಿಕ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details