ಮೈಸೂರು: ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯವರನ್ನೇ ಮಾಡಿ ಎಂದು ಎಚ್ ಡಿ. ಕುಮಾರಸ್ವಾಮಿ ಬಿಜೆಪಿ ಹೈ ಕಮಾಂಡ್ ಮುಂದೆ ಹೇಳಿ ಬಂದಿದ್ದಾರೆ. ನಾವು ಕುಮಾರಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ ಎಂದು ಕೇಳಿಲ್ಲ. ನಾವು ಎಲ್ಲೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬಿಟ್ಟುಕೊಡಿ ಎಂದು ಕೇಳಿಲ್ಲ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿ ಟಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ, ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದದರು. ಬಿಜೆಪಿಯಲ್ಲಿ ಅಸಮಾಧಾನಕ್ಕೆ ಅವಕಾಶವೇ ಇಲ್ಲ. ಹೈ ಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಸೋಮಣ್ಣ ಅವರಿಗೆ ಇರುವ ಅಸಮಾಧಾನವನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತಾರೆ. ನಮ್ಮ ಗುರಿ ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು. ನಾವು ಇಷ್ಟು ಸ್ಥಾನ ಬಿಟ್ಟು ಕೊಡಿ ಎಂದು ಕೇಳುವುದಿಲ್ಲ. ಗೆಲ್ಲುವುದೇ ನಮ್ಮ ಮಾನದಂಡ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎರಡೂ ಕಡೆಯಿಂದ ಸರ್ವೇ ನಡೆಸಲಾಗುತ್ತಿದೆ. ಆನಂತರ ಮುಂದಿನ ತೀರ್ಮಾನ ಎಂದರು.
ಹಾಸನಾಂಬೆ ಎದುರು ಪಕ್ಷ ಕಟ್ಟುವ ಪ್ರತಿಜ್ಞೆ:ಹಾಸನಾಂಬೆ ಎದುರು ನಾವ್ಯಾರು ಆಣೆ ಮಾಡಿಲ್ಲ. ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ. ಜೆಡಿಎಸ್ ನಾಯಕರು ಯಾರು ಪಕ್ಷ ಬಿಡುತ್ತಿಲ್ಲ. ಲಕ್ಷಾಂತರ ಜನರು ಬರುವ ತಾಯಿಯ ಎದುರು ಆಣೆ ಮಾಡಲು ಸಾಧ್ಯವೇ. ನಾವೆಲ್ಲ ರಾಜ್ಯದಲ್ಲಿ ಪಕ್ಷ ಬಲವರ್ಧನೆ ಮಾಡಿ, ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದು ನಮ್ಮ ಗುರಿ, ಆ ದಾರಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ. ದೇವೇಗೌಡ ಸ್ಪಷ್ಟನೆ ನೀಡಿದರು.
ಚುನಾವಣೆ ನಂತರ ಸರ್ಕಾರ ಪತನ:ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಜಿ ಟಿ. ದೇವೇಗೌಡ, ಈ ವಿಚಾರವನ್ನು ನಾವು ಹೇಳುತ್ತಿಲ್ಲ. ಇದನ್ನು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಮನಸ್ಸಿನಲ್ಲೂ ಅದೇ ಆಸೆ ಇದೆ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮಾಡುತ್ತಿಲ್ಲ. ಕೇವಲ ಗ್ಯಾರಂಟಿ ಹಿಂದೆ ಸರ್ಕಾರ ಹೋಗುತ್ತಿದೆ. ಆರು ತಿಂಗಳವರೆಗೆ ಇದೇ ಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಲು ಕಷ್ಟವಾಗುತ್ತದೆ. ಇವೆಲ್ಲವೂ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಲೋಕಸಭಾ ಚುನಾವಣೆಯ ನಂತರ ಸರ್ಕಾರ ಪತನವಾಗಲಿದೆ. ಸಮ್ಮಿಶ್ರ ಸರ್ಕಾರದ ರಚನೆಗೆ ಅವಕಾಶ ಸಿಗಲಿದೆ ಎಂದು ಶಾಸಕ ಜಿ ಟಿ. ದೇವೇಗೌಡ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.
ಬಿ ವೈ ವಿಜಯೇಂದ್ರ ಆಯ್ಕೆ ಒಳ್ಳೆಯ ಬೆಳವಣಿಗೆ:ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಅವರು ಪ್ರಬಲ ಸಮುದಾಯದ ಯುವ ನಾಯಕರು. ಒಂದು ಕಡೆ ಜೆಡಿಎಸ್ನಲ್ಲಿ ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅದೇ ರೀತಿ ಯಡಿಯೂರಪ್ಪ ಅವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರುವುದು ಇಬ್ಬರು ಒಟ್ಟಾಗಿ ಹೋಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸುಲಭವಾಗುತ್ತದೆ. ಜೊತೆಗೆ ಯಡಿಯೂರಪ್ಪ ಅವರು ಸಿಎಂ ಆಗಲು ವಿಜಯೇಂದ್ರ ಅವರ ಚಾಣಾಕ್ಷತನವೂ ಇತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿದ್ದಕ್ಕೆ ಬಿಜೆಪಿಗೆ ಹಿನ್ನಡೆಯಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಯೋಚನೆ ಮಾಡಿಯೇ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ಸರಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಜಿ ಟಿ. ದೇವೇಗೌಡ ಹೇಳಿಕೆ ನೀಡಿದರು.
ಇದನ್ನೂ ಓದಿ:ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು