ಮೈಸೂರು:ರೈತರ ಪ್ರತಿಭಟನೆಗೆ ನಮ್ಮ ವಿರೋಧ ಇಲ್ಲ. ಆದರೆ, ಟ್ರ್ಯಾಕ್ಟರ್ ರ‍್ಯಾಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೃಷಿ ಕಾಯ್ದೆ ವಿರೋಧಿಸಿ, ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಕರೆ ನೀಡಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ನಮ್ಮ ವಿರೋಧ ಇಲ್ಲ. ಆದರೆ, ರ‍್ಯಾಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಬೆಂಗಳೂರಿನಲ್ಲಿ ಮೊದಲೇ ಜನ ಸಂದಣಿ ಹೆಚ್ಚು. ಏಕ ಕಾಲದಲ್ಲಿ ಸಾವಿರಾರು ಟ್ರ್ಯಾಕ್ಟರ್ಗಳು ರಸ್ತೆಗೆ ಇಳಿದರೆ ತೊಂದರೆ ಆಗುತ್ತದೆ. ಅದಕ್ಕೆ ಬದಲು ಸಾಂಕೇತಿಕವಾಗಿ 50 ಟ್ರ್ಯಾಕ್ಟರ್ಗಳನ್ನು ತಂದು ಮೆರವಣಿಗೆ ಮಾಡಿದರೆ ನಮ್ಮ ಅಭ್ಯಂತರ ಏನು ಇಲ್ಲ. ಜೊತೆಗೆ ಬೆಂಗಳೂರಿನಲ್ಲಿ ರ‍್ಯಾಲಿ ನಡೆಸಲು ಪೊಲೀಸ್ ಕಮಿಷನರ್ ಅನುಮತಿ ನೀಡಿಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.