ಕರ್ನಾಟಕ

karnataka

ETV Bharat / state

'ನನಗೂ ಒಂದು ಅವಕಾಶ ಕೊಡಿ': ಪ್ರಜಾಧ್ವನಿ ಯಾತ್ರೆಯಲ್ಲಿ ಸಿಎಂ ಬಯಕೆ ವ್ಯಕ್ತಪಡಿಸಿದ ಡಿಕೆಶಿ - DK Shivakumar

ಚಾಮರಾಜನಗರದಲ್ಲಿ ಆಕ್ಸಿಜನ್​ ಇಲ್ಲದೇ 36 ಜನ ಮೃತಪಟ್ಟಿದ್ದರು. ಸತ್ತವರ ಮನೆಗೆ ಹೋಗಿ ಸಾಂತ್ವನವನ್ನೂ ಹೇಳಲಿಲ್ಲ. ಇದು ಬಿಜೆಪಿ ಸಂಸ್ಕೃತಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

there-is-a-corrupt-government-in-the-state-dk-shivakumar
ರಾಜ್ಯದಲ್ಲಿ ಇರುವುದು ಕಳಂಕಿತ ಸರ್ಕಾರ: ಡಿ.ಕೆ.ಶಿವಕುಮಾರ್ ವಾಗ್ದಾಳಿ

By

Published : Feb 20, 2023, 8:02 PM IST

ಮೈಸೂರು: "ಕರ್ನಾಟಕದಲ್ಲಿ ಇರುವುದು ಕಳಂಕಿತ ಸರ್ಕಾರ. ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಇವರು ಸುಳ್ಳು ಲೆಕ್ಕ ತೋರಿಸಿದ್ದಾರೆ" ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ವಾಗ್ಧಾಳಿ ನಡೆಸಿದರು. ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಬನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಪ್ರಜಾಧ್ವನಿ ಯಾತ್ರೆ ನನ್ನ ಯಾತ್ರೆಯಲ್ಲ. ಇದು ನಿಮ್ಮ‌ ನೋವು, ಸಂಕಟ ಹಾಗೂ‌ ಬದುಕಿನ ಪ್ರತಿಧ್ವನಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಅಧಿಕಾರ ಇದ್ದಾಗ ಏನು ಮಾಡಬೇಕು ಎಂಬುದು ಮುಖ್ಯ. ನಾವು ಅಧಿಕಾರಕ್ಕೆ ಬರಲು ಪ್ರಜಾಧ್ವನಿ ಜನರ ದನಿಯಾದಾಗ ಮಾತ್ರ ನಿಮ್ಮ ಸೇವೆ ಮಾಡಲು ಸಾಧ್ಯ. ಆದ್ದರಿಂದ ನನಗೂ ಒಂದು ಅವಕಾಶ ನೀಡಿ" ಎಂದು ಮನವಿ ಮಾಡಿದರು.

ಕೋವಿಡ್ ಸಮಯದಲ್ಲಿ ಆಕ್ಸಿಜನ್ ಇಲ್ಲದೇ ಚಾಮರಾಜನಗರದಲ್ಲಿ 36 ಜನ ಸಾವಿಗೀಡಾದರು. ಆಗ ಆರೋಗ್ಯ ಸಚಿವರು ಮೂವರಷ್ಟೇ ಮರಣ ಹೊಂದಿದರು ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಸಾವಿನ ಸಂಖ್ಯೆ 36 ಆಗಿತ್ತು. ಆದರೂ ಆಗಿನ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಆರೋಗ್ಯ ಸಚಿವ ಸುಧಾಕರ್ ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಇದು ಬಿಜೆಪಿಯ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದರೂ ಜನ ನಮಗೆ ಬೆಂಬಲ ನೀಡಲಿಲ್ಲ. ಆದ್ದರಿಂದ ಕೋಮುವಾದಿಗಳನ್ನು ದೂರವಿಡಲು ಕುಮಾರಸ್ವಾಮಿಯವರಿಗೆ ಬೇಷರತ್ ಬೆಂಬಲ ನೀಡಿದೆವು. ಆದರೆ‌‌ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ಭ್ರಷ್ಟ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಅವರು ಅಧಿಕಾರಕ್ಕೆ ಬರಲು ಯಾರು ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ದೇವೇಗೌಡರನ್ನು ಪ್ರಧಾನಿ ಮಾಡಿದೆ. ಈಗ ನಾನು ನಿಮ್ಮ ಮಗನಾಗಿ ಸೇವೆ ಮಾಡಲು‌ ಬಂದಿದ್ದೇನೆ, ನನ್ನ ಕೈ ಬಲಪಡಿಸಿ ಎಂದು ಡಿಕೆಶಿ ಅವರು ಮುಖ್ಯಮಂತ್ರಿ ಆಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಉಚಿತ 200 ಯೂನಿಟ್ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ಹಿಂದುಳಿದ ಕುಟುಂಬಗಳಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂಬ ಘೋಷಣೆಗೆ ಹಣ ಎಲ್ಲಿಂದ ತರುತ್ತಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಣ ತರುವುದು ನಮಗೆ ಗೊತ್ತಿದೆ, ಬಿಜೆಪಿಯವರು ತೆಗೆದುಕೊಳ್ಳುವ 40 ಪರ್ಸೆಂಟ್​ ಕಮಿಷನ್ ಲೂಟಿ ನಿಲ್ಲಿಸಿದರೆ ಎಲ್ಲ ಯೋಜನೆಗಳಿಗೆ ಹಣ ಪೂರೈಸಬಹುದು. ಆದ್ದರಿಂದ ಭ್ರಷ್ಟ ಸರಕಾರವನ್ನು ತೆಗೆಯಿರಿ, ಕಾಂಗ್ರೆಸ್​ಗೆ ಒಂದು ಅವಕಾಶ ನೀಡಿ ಎಂದು ಕೇಳಿಕೊಂಡರು.

ಇದನ್ನೂ ಓದಿ:ಬಿಎಸ್​ವೈ ಪ್ರಭಾವದಿಂದ ಬಿಜೆಪಿಯನ್ನು ಬಿಡಿಸಲು ವೇದಿಕೆ ಸಜ್ಜಾಗುತ್ತಿದೆಯೇ?: ಜೆಡಿಎಸ್

ABOUT THE AUTHOR

...view details