ಮೈಸೂರು: ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ತೀರ್ಮಾನವನ್ನು ಬಿಜೆಪಿ ಸರ್ಕಾರವಿದ್ದಾಗಲೇ ತೆಗೆದುಕೊಳ್ಳಲಾಗಿದ್ದು, ಅದನ್ನು ಬದಲಾಯಿಸಿ ಟಿಪ್ಪುವಿನ ಹೆಸರಿಡಲು ಕಾಂಗ್ರೆಸ್ ಸರ್ಕಾರದಲ್ಲಿ ಚರ್ಚೆಗಳು ಶುರುವಾಗಿದೆ. ಈ ರೀತಿಯ ಚರ್ಚೆ ಅಸಂಬದ್ಧ. ನಾವು ಯಾವುದೇ ಕಾರಣಕ್ಕೂ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಬಿಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪತ್ರದ ಮೂಲಕ ಕಿಡಿ ಕಾರಿದ್ದಾರೆ.
ಸಂಸದ ಪ್ರತಾಪ್ ಸಿಂಹ ಇಂದು ಪತ್ರ ಬರೆದು, "ಮೈಸೂರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಬಗ್ಗೆ ಕಾಂಗ್ರೆಸ್ ಸರ್ಕಾರ ಚರ್ಚೆ ಶುರು ಮಾಡಿದೆ. ಆದರೆ, ಈ ರೀತಿಯ ಚರ್ಚೆಯ ವಿಚಾರ ಹಾಗೂ ಪ್ರಸ್ತಾವನೆ ಅಸಂಬದ್ಧವಾಗಿದೆ. ಈಗಾಗಲೇ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಬಸವರಾಜ ಬೊಮ್ಮಾಯಿ ಅವರಿಗೆ ಖುದ್ದಾಗಿ ಪತ್ರ ಬರೆದು, ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ ಎಂದು ಮೈಸೂರು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ. ಈ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿ ಇದೆ. ಈಗ ಕಾಂಗ್ರೆಸ್ ಸರ್ಕಾರ ಟಿಪ್ಪು ಹೆಸರನ್ನು ಮೈಸೂರಿನ ವಿಮಾನ ನಿಲ್ದಾಣಕ್ಕೆ ಇಡಲು ಪ್ರಯತ್ನಿಸುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಬಿಡುವುದಿಲ್ಲ" ಎಂದು ಹೇಳಿದ್ದಾರೆ.