ಮೈಸೂರು: ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾದಂತೆ, ಅಪಾಯವು ಹೆಚ್ಚಾಗುತ್ತಿದೆ. ಇದೀಗ ನಂಜನಗೂಡಿನಿಂದ ಅನತಿ ದೂರದಲ್ಲಿರುವ ಪರಶುರಾಮ ದೇವಾಲಯವು ಇದೇ ಮೊದಲ ಬಾರಿಗೆ ಸಂಪೂರ್ಣ ಮುಳುಗಿ ಹೋಗಿದೆ. ದೇವಸ್ಥಾನಕ್ಕೆ ಹೋಗುವ ಮಾರ್ಗವು ಜಲಾವೃತವಾಗಿರುವುದರಿಂದ ಭಕ್ತರು ದೂರದಲ್ಲೇ ನಿಂತು ಪರಶುರಾಮನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತ ಭಕ್ತರನ್ನೇ ನಂಬಿರುವ ದೇವಸ್ಥಾನದ ರಸ್ತೆ ಬದಿಯ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ದೇವಸ್ಥಾನದ ಸುತ್ತಮುತ್ತಲಿನ ಕೃಷಿ ಭೂಮಿ ಕೂಡ ಜಲಾವೃತವಾಗಿದೆ.
ಕಬಿನಿ ಜಲಾಶಯದಿಂದ 35,333 ಕ್ಯೂಸೆಕ್ ನೀರು ಹೊರಕ್ಕೆ ಬಿಟ್ಟಿರುವುದರಿಂದ ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇಗುಲದ ಹಿಂಭಾಗದಲ್ಲಿರುವ ತೋಪಿನ ಬೀದಿ, ಕುರುಬಗೆರೆ, ಹಳ್ಳದಕೇರಿ ಪ್ರದೇಶಗಳು ಭಾಗಶಃ ಜಲಾವೃತವಾಗಿವೆ. ಕಪಿಲಾ ನದಿ ತೀರದ ಮನೆಗಳಿಗೆ ಮತ್ತು ಜಮೀನುಗಳಿಗೆ ನೀರು ನುಗ್ಗಿದ್ದು ಪ್ರವಾಹ ಭೀತಿ ಎದುರಾಗಿದೆ. ತಗ್ಗು ಪ್ರದೇಶದ ಜನರಿಗೆ ಕ್ಷಣಕ್ಷಣಕ್ಕೂ ಆತಂಕ ಎದುರಾಗಿದೆ. ಕಳೆದ 60 ವರ್ಷಗಳಿಂದ ಅತಂತ್ರರಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 15 ರಿಂದ ನೀರು ಬಿಡುಗಡೆ: ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 15 ರಿಂದ ಹತ್ತು ದಿನಗಳ ಕಾಲ ನಿತ್ಯ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. 2022ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ಜಿಪಂ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಮೊದಲಿಗೆ ಕೆರೆ ಕಟ್ಟೆಗಳು ಭರ್ತಿಯಾಗಲು ನೀರು ಹರಿಸಲಾಗುವುದು. ಈಗಾಗಲೇ ಕೆರೆಗಳಲ್ಲಿ ಶೇಕಡಾ 30 ರಷ್ಟು ನೀರು ತುಂಬಿದೆ. ಹತ್ತು ದಿನ ಕೆರೆಗಳಿಗೆ ನೀರು ಹರಿಸಿ ನಂತರ ನಾಲೆಗಳಿಗೆ ನೀರು ಹರಿಸುವಂತೆ ಸಚಿವರು ಸೂಚಿಸಿದರು. ಜುಲೈ 15 ರಿಂದ 24ರವರೆಗೆ ಕೆರೆಗಳಿಗೆ, ಜುಲೈ 25 ರಿಂದ ಆಗಸ್ಟ್ 14ರವರೆಗೆ ನಾಲೆಗಳಿಗೆ ನೀರು ಹರಿಸಲಾಗುವುದು. ಆಗಸ್ಟ್ 15ರಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.