ಮೈಸೂರು:ಜಾನುವಾರುಗಳ ಬಾಯಾರಿಕೆ ನೀಗಲು ಉಳಿಸಿದ್ದ ಕೆರೆ ನೀರು ಸಂಪೂರ್ಣ ಬರಿದಾಗಿದ್ದು, ನೀರಿಗೆ ಹಾಹಾಕಾರ ಎದುರಾಗಲಿದೆ ಎಂಬ ಆತಂಕ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿ ಗ್ರಾಮಸ್ಥರಲ್ಲಿ ಮೂಡಿದೆ.
ಭೀಕರ ಬರಗಾಲ.. ಜಾನುವಾರುಗಳಿಗೆ ಬಾಯಾರಿಕೆ ಈ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಎದುರಾದ ಭೀಕರ ಬರಗಾಲದಿಂದ ಪಾಠ ಕಲಿತ ಇಲ್ಲಿನ ಜನರು, ಜಾನುವಾರುಗಳಿಗೆ ಕೆರೆ ನೀರನ್ನು ಮೀಸಲಿಟ್ಟು ಅದನ್ನು ಯಾರೂ ಕೂಡ ಗೃಹೋಪಯೋಗಕ್ಕೆ ಬಳಸದಂತೆ ಕಟ್ಟಪ್ಪಣೆ ವಿಧಿಸಿ ಬೋಡ್೯ ಕೂಡ ಹಾಕಿದರು.
ಇದರ ಪರಿಣಾಮವಾಗಿ ನಾಲ್ಕು ವರ್ಷಗಳ ಕಾಲ ಕೆರೆಯಲ್ಲಿ ನೀರಿದ್ದ ಪರಿಣಾಮವಾಗಿ ಬರಗಾಲ ಬಂದರೂ ಈ ಗ್ರಾಮದ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ಇದರಿಂದ ರೈತರಲ್ಲಿ ಹಾಗೂ ಜಾನುವಾರು ಸಾಕಾಣೆ ಮಾಡುತ್ತಿದ್ದ ಜನರಲ್ಲಿ ನೆಮ್ಮದಿ ಇತ್ತು.
ಆದರೀಗ ಆ ನೆಮ್ಮದಿ ದೂರವಾಗುವಂತೆ ಕೆರೆ ತನ್ನ ಬರಿದಾದ ಮುಖ ತೋರಿಸುತ್ತಿದೆ. ನಿಗದಿಯಂತೆ ಮೇ ತಿಂಗಳ ಆರಂಭದಲ್ಲಿಯೇ ಮುಂಗಾರು ಆರಂಭಗೊಳ್ಳಬೇಕಿತ್ತು. ಆದರೆ, ಅಗಸ್ಟ್ ಆರಂಭಗೊಂಡಿದ್ದರೂ ಕೂಡ ಇಂದಿಗೂ ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಬಿಸಿಲಿನ ವಾತಾವರಣವೇ ಇರುವುದರಿಂದ ಕೆರೆಯಲ್ಲಿ ನೀರು ಒಂದೆಡೆ ಆವಿಯಾದರೆ, ಮತ್ತೊಂದೆಡೆ ಜಾನುವಾರುಗಳು ನೀರನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತಿದೆ. ಇದರಿಂದ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ.ಆದರೆ, ಜಾನುವಾರುಗಳಿಗಾಗಿಯೇ ಕೆರೆ ನೀರನ್ನು ಮೀಸಲಿಟ್ಟು, ಕೆಲ ದಿನಗಳಿಂದ ನೀರು ಖಾಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೈಕೊಟ್ಟ ಮುಂಗಾರು:
ಕಳೆದ 10 ವರ್ಷಗಳಿಂದ ವಾಡಿಕೆಯಂತೆ ಮುಂಗಾರು ಮಳೆ ಆಗದಿರುವುದು ರೈತಾಪಿ ವರ್ಗದಿಂದ ಬೇಸರ ಮೂಡಿದೆ. ಭೀಕರ ಬರಗಾಲದಿಂದ ಎಚ್ಚೆತ್ತ ಗ್ರಾಮಸ್ಥರು ನಾಲ್ಕು ವರ್ಷಗಳ ಹಿಂದೆ ಜಾನುವಾರುಗಳಿಗಾಗಿ ಮೀಸಲಿಟ್ಟ ಕೆರೆ ನೀರು ಖಾಲಿಯಾಗಿರುವುದರಿಂದ ಮಳೆ ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಇವುಗಳ ರಕ್ಷಣೆ ಹೇಗೆ ಮಾಡುವುದು ಎಂಬ ಚಿಂತೆ ಆವರಿಸಿದೆ.