ಮೈಸೂರು: ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕಪಿಲಾ ನದಿಗೆ ಬಿಟ್ಟಿದ್ದರಿಂದ ಸುತ್ತೂರು ಸೇತುವೆ ಮುಳುಗಡೆಯಾಗಿದೆ.
ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ನೀರು: ಸುತ್ತೂರು ಸೇತುವೆ ಮುಳುಗಡೆ - ಕಪಿಲಾ ನದಿ
ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕಪಿಲಾ ನದಿಗೆ ಬಿಟ್ಟಿರುವ ಪರಿಣಾಮ ಸುತ್ತೂರು ಸೇತುವೆ ಮುಳುಗಡೆಯಾಗಿದೆ.
ಕಳೆದ ಒಂದು ವಾರದಿಂದ ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ 40,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದೆ. ಈ ಹಿನ್ನಲೆ ಕಬಿನಿ ಜಲಾಶಯದಿಂದ ಇಂದು 60,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಹಾಗೂ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಮೇಲ್ಬಾಗಕ್ಕೆ ನೀರು ಬಂದಿದ್ದು, ಸುತ್ತೂರು ಕ್ಷೇತ್ರದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸುತ್ತೂರು ಸೇತುವೆ ಸಹ ಇಂದು ಮುಳುಗಡೆಯಾಗಿದೆ. ಹೀಗಾಗಿ ಯಾರೂ ಕೂಡ ಈ ಸೇತುವೆ ಮೇಲೆ ಹೋಗಬಾರದೆಂದು ನಿರ್ಬಂಧ ವಿಧಿಸಲಾಗಿದೆ.
ನದಿಪಾತ್ರದಲ್ಲಿ ವಾಸ ಮಾಡುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮದ ಅಭಿಯಂತರರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಹೆಚ್. ಡಿ. ಕೋಟೆ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಲೂ ಸಹ ಹಲವು ಹಳೆಯ ಮನೆಗಳು ಕುಸಿದು ಬಿದ್ದಿವೆ.