ಮೈಸೂರು:ನಗರದಲ್ಲಿ ನಡೆಯುತ್ತಿರುವ ಭೂ ಅಕ್ರಮಗಳ ವಿಶೇಷ ತನಿಖೆಗೆ ರೋಹಿಣಿ ಸಿಂಧೂರಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಎಂದು ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮನವಿ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಮೈಸೂರಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹೆಚ್. ವಿಶ್ವನಾಥ್ ಮೈಸೂರು ಸುತ್ತ ಮುತ್ತ ನಡೆಯುತ್ತಿರುವ ಭೂ ಅಕ್ರಮಗಳ ತನಿಖೆಗಾಗಿ ಶೀಘ್ರವೇ ರೋಹಿಣಿ ಸಿಂಧೂರಿ ಅವರನ್ನು ವಿಶೇಷ ತನಿಖಾಧಿಕಾರಿಯಾಗಿ 6 ತಿಂಗಳು ನೇಮಿಸಿ ತನಿಖೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಭೂ ಹಗರಣಗಳ ಬಗ್ಗೆ 4 ಆದೇಶ ಮಾಡಿದ್ದು ಈ ಬಗ್ಗೆ ತನಿಖೆ ನಡೆಸಬೇಕು. ರಾಜಕಾಲುವೆ ಮೇಲೆ ಸಾ.ರಾ.ಮಹೇಶ್ ಕಲ್ಯಾಣಮಂಟಪ ನಿರ್ಮಾಣವಾಗಿದೆ. ಜೊತೆಗೆ ಜನಪ್ರತಿನಿಧಿಗಳು ರೀಯಲ್ ಎಸ್ಟೇಟ್ ವ್ಯವಹಾರದವರು ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿದ್ದಾರೆ, ಅದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇನ್ನೂ ಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾನಾಗ್ ಒಳ್ಳೆಯ ಅಧಿಕಾರಿ. ಆದರೆ ಅವರ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ ಎಂದು ಆರೋಪಿಸಿದರು.