ಮೈಸೂರು :ರಾಜ್ಯಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು. ನಗರದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ದೇವತೆಯ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡು ಸುಭಿಕ್ಷೆಯಾಗಲಿ, ಒಳ್ಳೆಯ ಮಳೆಬರಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ದಸರಾ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಇಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗದಂತೆ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಚಾಮುಂಡಿ ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆಯಾಗದ ರೀತಿಯಲ್ಲಿ, ಆಕರ್ಷಿತ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯ ಮೂಲಕ ತಜ್ಞರೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣವನ್ನು ಮಹಿಳೆಯರಿಗೆ ನೀಡಲಾಗಿದೆ. ಇದರಿಂದಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.