ಮೈಸೂರು: ಆರೋಗ್ಯ ಸುಧಾರಣೆಯ ಉದ್ದೇಶದಿಂದ ನಗರದ ಸಾಕಷ್ಟು ಜನರು ವಾಯು ವಿಹಾರಕ್ಕಾಗಿ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಬರುತ್ತಾರೆ. ಆದರೆ ಇದೀಗ ಜಿಲ್ಲಾಡಳಿತ ಇಲ್ಲಿಗೂ ಪ್ರವೇಶ ಶುಲ್ಕವನ್ನು ನಿಗದಿಗೊಳಿಸಿ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ನಗರದ ನಜರ್ಬಾದ್ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಬೆಳಗ್ಗೆ, ಸಂಜೆ ವಾಯು ವಿಹಾರಕ್ಕೆ ತೆರಳಬೇಕು ಎಂದು ಖುಷಿಯಿಂದ ಬರುವ ಜನರು ಜೇಬಿನಲ್ಲಿ 50 ರೂ. ತಂದಿದ್ದರೆ ಮಾತ್ರ ಪ್ರವೇಶ ಎಂಬಂತಹ ಸ್ಥಿತಿ ಬಂದಿದೆ.
ಕ್ರೀಡಾಂಗಣಕ್ಕೆ ನಿಗದಿಯಾದ ಶುಲ್ಕ ಕಂಡು ಬೇಸರಗೊಂಡ ಸಾರ್ವಜನಿಕರು ಜಿಲ್ಲಾಡಳಿತದ ಅಧೀನದಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ವಾಯು ವಿಹಾರ, ಕ್ರೀಡಾ ಚಟುವಟಿಕೆಗಳಿಗಾಗಿ ವಯೋವೃದ್ಧರಿಂದ ಹಿಡಿದು, ಮಕ್ಕಳತನಕ ಇಲ್ಲಿಗೆ ಬರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಹಲವಾರು ವರ್ಷಗಳಿಂದ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಬಂದು ಹೋಗುತ್ತಿದ್ದವರಿಗೆ ಈ ದಿಢೀರ್ 'ಶುಲ್ಕ ನಿಗದಿ' ಅಸಮಾಧಾನ ತಂದಿದೆ. ಸಾಮಾನ್ಯವಾಗಿ ಮಧ್ಯಮ ವರ್ಗ ಹಾಗೂ ಬಡವರು ವಾಕಿಂಗ್ಗೆ ಬರುತ್ತಾರೆ. ಅಂತವರಿಗೆ ಈ ಶುಲ್ಕ ಹೊರೆಯಾಗಿದೆ.
ನಜರ್ಬಾದ್, ಜಲಪುರಿ ಪೊಲೀಸ್ ವಸತಿ ಗೃಹ, ಕ್ಯಾತಮಾರನಹಳ್ಳಿ, ಉದಯಗಿರಿ, ಕಲ್ಯಾಣಗಿರಿ, ಸಿದ್ದಾರ್ಥನಗರ, ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಿಂದ 5 ಸಾವಿರಕ್ಕೂ ಹೆಚ್ಚು ಮಂದಿ ವಾಯು ವಿಹಾರಕ್ಕೆ ಇಲ್ಲಿಗೆ ಬರುತ್ತಾರೆ. ಕೊರೊನಾ ಸಂದರ್ಭದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣ ಬಂದ್ ಮಾಡಲಾಗಿತ್ತು. ಆದರೀಗ ಅನ್ಲಾಕ್ ಘೋಷಣೆಯಾದ ಬಳಿಕ ಮತ್ತೆ ತೆರೆಯಲಾಗಿದ್ದು, ವಾಯು ವಿಹಾರಿಗಳ ಸಂಖ್ಯೆಯೂ ಹೆಚ್ಚಿದೆ. ಆದರೆ ಶುಲ್ಕ ನಿಗದಿ ಮಾತ್ರ ಜನರಲ್ಲಿ ಬೇಸರ ಮೂಡಿಸಿದೆ.