ಮೈಸೂರು:ಯುವಕರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗಬೇಕು. ಪ್ರತಿಯೊಬ್ಬ ಮತದಾರರು ನನ್ನ ಮತ ಮಾರಾಟಕ್ಕೆ ಇಲ್ಲ ಎಂಬ ತತ್ವಕ್ಕೆ ಅನುಗುಣವಾಗಿ ಮತ ಚಲಾಯಿಸಬೇಕು ಆಗ ಮಾತ್ರ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಕರ್ನಾಟಕ ಕಲಾಮಂದಿರದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಜಗತ್ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಇಡೀ ಜಗತ್ತಿಗೆ ಪ್ರಜಾ ಪ್ರಭುತ್ವದ ಬುನಾದಿಯನ್ನು ಬಸವಣ್ಣನವರ ಅನುಭವ ಮಂಟಪ ಹಾಕಿಕೊಟ್ಟಿತು. 1881 ರಲ್ಲೆ ಮೈಸೂರು ಮಹಾರಾಜರು ಪ್ರಜಾ ಪ್ರಭುತ್ವದ ಬುನಾದಿ ಹಾಕಿಕೊಟ್ಟರು ಎಂದರು.
ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹನೀಯರ ಸಾಧನೆ ಅಪಾರ. ಸ್ವಾತಂತ್ರ ಬಂದಾಗ ನಮಗೆ ಆಹಾರ ಕೊರತೆ ಇತ್ತು. ವಿದೇಶ ದಿಂದ ಆಹಾರ ತರಿಸಲಾಗುತ್ತಿತ್ತು. ಆದರೆ, ಇಂದು ಆಹಾರದ ಸ್ವಾವಲಂಬನೆ ಸಾಧಿಸಿದ್ದೇವೆ. ಇದಕ್ಕೆ ಕಾರಣ ನಮ್ಮ ರೈತರು. ಸ್ವಾತಂತ್ರ್ಯ ಬಂದಾಗ 299 ರೂ ತಲಾ ಆದಾಯ ಇತ್ತು ಇಂದು 1,18, 235 ಇದೆ. ಇಂದು 35 ಉಪಗ್ರಹಗಳನ್ನು ಏಕಕಾಲದಲ್ಲಿ ಹಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಕಾಲು ಇಡುತ್ತೇವೆ. ನಮ್ಮ ದೇಶದ ಸೈನ್ಯ ಬಲಿಷ್ಟ ವಾಗಿದೆ. ಆರೋಗ್ಯ ಕ್ಷೇತ್ರ ಉತ್ತಮವಾಗಿದ್ದು, ಕರೋನಾ ಸಂದರ್ಭದಲ್ಲಿ ಲಸಿಕೆ ಕಂಡು ಹಿಡಿದು ನಮ್ಮ ದೇಶದ ಪ್ರಜೆಗಳಿಗೆ ಮಾತ್ರವಲ್ಲದೇ ಹೊರ ದೇಶಗಳಿಗೂ ಲಸಿಕೆ ಪೂರೈಕೆ ಮಾಡಲಾಗಿದೆ. ಜಿ20 ದೇಶಗಳ ಅಧ್ಯಕ್ಷತೆ ವಹಿಸಿ ಕೊಳ್ಳುವ ಕಾಲ ಬಂದಿದೆ.
ಆಮಿಷಕ್ಕೆ ಬಲಿಯಾಗಬೇಡಿ: ನಮ್ಮ ಸಂವಿಧಾನ ಜಗತ್ತಿನ ಅತಿ ಶ್ರೇಷ್ಠ ಸಂವಿಧಾನ. ಸಾಮಾನ್ಯ ಪ್ರಜೆ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿ ಆಗಿರುವುದು ಇದಕ್ಕೆ ಕಾರಣ ನಮ್ಮ ಸಂವಿಧಾನ. ಚುನಾವಣೆಗಳು ಇಂದು ಹಣ, ಹೆಂಡದ ಮೇಲೆ ನಡೆಯುತ್ತಿವೆ. ಇದಕ್ಕೆ ಸಂವಿಧಾನಬದ್ಧ ಸಂಸ್ಥೆಗಳು ಹಾಗೂ ಜನರು ಕಾರಣರಾಗಿದ್ದಾರೆ. ಕಾರ್ಯಾಂಗದಲ್ಲಿ ಇರುವ ಜಟಿಲತೆ ಹಾಗೂ ಅಧಿಕಾರಿಗಳ ಕಾರ್ಯವೈಖರಿಯಿಂದ ಜನರು ತತ್ತರಿಸುತ್ತಿದ್ದಾರೆ.