ಮೈಸೂರು:ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಜನರನ್ನು ಒಟ್ಟು ಸೇರಿಸಿ, ಶ್ರಮಪಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರು ಬಾಲಗಂಗಾಧರ ತಿಲಕ್ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ವೀರ ಸಾವರ್ಕರ್ ಯುವಬಳಗದ ವತಿಯಿಂದ ಭಾನುವಾರ ಸಂಜೆ ನಗರದ ತಿಲಕ್ ನಗರದಲ್ಲಿ ಆಯೋಜಿಸಿದ್ದ ಬಾಲಗಂಗಾಧರ ತಿಲಕರ 167ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕ ಮಾನ್ಯ ಬಾಲಗಂಗಾಧರ ತಿಲಕರ 167ನೇ ಜಯಂತ್ಯುತ್ಸವವನ್ನು ತಿಲಕ್ ನಗರದಲ್ಲಿ ಆಚರಿಸುತ್ತಿರುವುದು ಅತ್ಯಂತ ಮಹತ್ವಪೂರ್ಣದ್ದಾಗಿದೆ. ನಾವು ಇವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಅದು ಕಡಿಮೆ. ಯಾಕೆಂದರೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟವರು ಅವರು. ಅವರು ಪಟ್ಟಿರುವ ಶ್ರಮ ಊಹಿಸಲೂ ಅಸಾಧ್ಯ. ಹಿಂದೆ ನಮ್ಮ ಸಮಾಜವನ್ನು ಒಗ್ಗೂಡಿಸುವುದೇ ದೊಡ್ಡ ಕಷ್ಟಕರವಾದ ಕಾರ್ಯವಾಗಿತ್ತು. ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಎಂದರು.
ಸಮಾಜದಲ್ಲಿ ಒಗ್ಗಟ್ಟಾಗಿ ಉಳಿದರೆ ಮಾತ್ರ ಅ ಸ್ವಾತಂತ್ರ್ಯ ಉಳಿಯುತ್ತದೆ:ಅವರನ್ನು ನಾವು ಸದಾ ನೆನಪಿಸಿಕೊಳ್ಳಬೇಕು, ಜೊತೆಗೆ ನಾವು ಅವರಿಗೆ ಕೊಡಬೇಕಾದ ಗೌರವ ಎಂದರೆ, ಅವರು ಏನು ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟು ಹೋಗಿದ್ದಾರೆಯೋ ನಾವು ಅದನ್ನು ಕೈತಪ್ಪಿ ಹೋಗದಂತೆ ಸಮಾಜದಲ್ಲಿ ಒಗ್ಗಟ್ಟಾಗಿ ಉಳಿದರೆ ಮಾತ್ರ ಅ ಸ್ವಾತಂತ್ರ್ಯ ಉಳಿಯುತ್ತದೆ. ನಮ್ಮೊಳಗೆ ನಾವು ಒಡಕು ಸೃಷ್ಟಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಜಗಳವಾಡುತ್ತಿದ್ದರೆ ಮೂರನೇಯವರು ಮಧ್ಯಪ್ರವೇಶಿಸಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡದೆ ಒಗ್ಗಟ್ಟಿನಿಂದ ಸಮಾಜದಲ್ಲಿ ಬದುಕಿದರೇ ಇದೇ ನಾವು ಅವರಿಗೆ ಕೊಡುವ ದೊಡ್ಡ ಗೌರವ ಎಂದು ಶ್ರೀಗಳು ಕಿವಿಮಾತು ಹೇಳಿದರು.