ಮೈಸೂರು:ಏರ್‌ಕ್ರಾಫ್ಟ್ ಕಾಯಿದೆ-1934, ಏರ್‌ಕ್ರಾಫ್ಟ್ ರೂಲ್ಸ್-1937, ಡಿಜಿಸಿಎ( ಡೈರಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್)ದಿಂದ ನೀಡಿರುವ ನಿರ್ದೇಶನಗಳನ್ವಯ ಡ್ರೋಣ್ ಕ್ಯಾಮೆರಾಗಳ ಬಳಕೆಯನ್ನು ನಿರ್ಬಂಧಿಸಿದ್ದರೂ ಸಹ ನಗರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವ ಸೊಬಗನ್ನು ಸೆರೆ ಹಿಡಿಯಲು ಡ್ರೋಣ್ ಕ್ಯಾಮರಾಗಳನ್ನು ಕೆಲವರು ಬಳಸಲು ಪ್ರಯತ್ನಿಸಿದ್ದಾರೆ.
ದಸರಾ ವೇಳೆ ಭದ್ರತಾ ದೃಷ್ಟಿಯಿಂದ ಮೈಸೂರು ನಗರದಾದ್ಯಂತ ಯಾವುದೇ ವ್ಯಕ್ತಿ, ಸಂಸ್ಥೆ, ಸರ್ಕಾರದ ಇಲಾಖೆಗಳು, ದಸರಾ ಉಪಸಮಿತಿಗಳ-ವತಿಯಿಂದ ಡ್ರೋಣ್ ಕ್ಯಾಮರಾಗಳ ಬಳಕೆಯನ್ನು ನಿರ್ಬಂಧಿಸಲಾಗಿರುತ್ತದೆ.ಈ ನಿರ್ಬಂಧವನ್ನು ಉಲ್ಲಂಘನೆ ಮಾಡಿ ಯಾರಾದರು ಡ್ರೋಣ್ ಕ್ಯಾಮರಾಗಳನ್ನು ಬಳಸುವುದು ಕಂಡುಬಂದಲ್ಲಿ ಸದರಿ ಪರಿಕರಣಗಳನ್ನು ಜಪ್ತಿ ಮಾಡಿ ಅವರ ಮೇಲೆ ಏರ್‌ಕ್ರಾಫ್ಟ್ ಕಾಯಿದೆ-1934, ಏರ್‌ಕ್ರಾಫ್ಟ್ ರೂಲ್ಸ್-1937, 287, 336, 337, 338 ಐಪಿಸಿ ರೀತಿ ಕಾನೂನು ಕ್ರಮ ಜರುಗಿಸಲಾಗುವುದೆಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಅರಮನೆ ಆವರಣಕ್ಕೆ ಹಾಗೂ ಬನ್ನಿಮಂಟಪಕ್ಕೆ ಆಗಮಿಸುವಾಗ ನಿಗಧಿಪಡಿಸಿದ ಪ್ರವೇಶ ದ್ವಾರಗಳಿಂದಲೇ ಆಗಮಿಸಬೇಕು. ಸಾರ್ವಜನಿಕರು ಆಗಮಿಸುವಾಗ ಲೋಹ ಶೋಧಕ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟು, ನಂತರ ಕಾರ್ಯಕ್ರಮದ ಸ್ಥಳಕ್ಕೆ ತೆರಳಬೇಕು, ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ಆಯುಧಗಳು, ಚಾಕು, ಗಾಜಿನ ಬಾಟಲ್‌ಗಳು ಮತ್ತು ದೊಡ್ಡ ಬ್ಯಾಗುಗಳನ್ನು ತರಬಾರದು. ಅರಮನೆಯ ಆವರಣದಲ್ಲಿ ಹಾಗೂ ಬನ್ನಿಮಂಟಪದಲ್ಲಿ ಯಾವುದೇ ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುಬೇಕು, ತಂಬಾಕು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧ ಏರಲಾಗಿದೆಯೆಂದು ಅರಮನೆಯ ಆವರಣ ಹಾಗೂ ಬನ್ನಿಮಂಟಪದಲ್ಲಿ ನಡೆಯಲ್ಲಿರುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಆಗಮಿಸುವ ಬಗ್ಗೆ ನಗರ ಪೊಲೀಸ್ ಆಯುಕ್ತರು ವಿಶೇಷ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ಕಾರ್ಯಕ್ರಮ ವೀಕ್ಷಣೆಗೆ ಬರುವವರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರು ನಿಗಧಿಪಡಿಸಿರುವ ಸ್ಥಳದಲ್ಲೇ ನಿಲ್ಲಿಸಬೇಕು, ಸಾರ್ವಜನಿಕರು ತಮಗೆ ಮೀಸಲಿರುವ ಆಸನಗಳಲ್ಲಿಯೇ ಕುಳಿತುಕೊಳ್ಳಬೇಕು, ಬೆಲೆ ಬಾಳುವ ವಸ್ತುಗಳನ್ನು ಅಥವಾ ಆಭರಣಗಳನ್ನು ತರಬಾರದೆಂದು ಮೈಸೂರು ನಗರದ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.