ಕರ್ನಾಟಕ

karnataka

ETV Bharat / state

ಸಿಎಂ ಕೂಡಲೇ ಪ್ರಿಯಾಂಕ್​ ಖರ್ಗೆ ರಾಜೀನಾಮೆ ಪಡೆಯಬೇಕು: ಬಿ ವೈ ವಿಜಯೇಂದ್ರ ಒತ್ತಾಯ

B Y Vijayendra: ಕಾಂಗ್ರೆಸ್​ ಒಳಗಿರುವ ಅಸಮಾಧಾನ ಎಲ್ಲರಿಗೂ ಗೊತ್ತಿದೆ, ಹಾಗಾಗಿ ಕಾಂಗ್ರೆಸ್​ ಪರಿಸ್ಥಿತಿ ನೋಡಲು ಲೋಕಸಭೆ ಚುನಾವಣೆವರೆಗೆ ಕಾಯಿರಿ ಎಂದು ಬಿ ವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

B Y Vijayendra Pressmeet
ಬಿ ವೈ ವಿಜಯೇಂದ್ರ ಸುದ್ದಿಗೋಷ್ಠಿ

By ETV Bharat Karnataka Team

Published : Nov 20, 2023, 12:45 PM IST

Updated : Nov 20, 2023, 3:37 PM IST

ಬಿ ವೈ ವಿಜಯೇಂದ್ರ ಸುದ್ದಿಗೋಷ್ಠಿ

ಮೈಸೂರು: ನಮ್ಮ ಪಕ್ಷದ ಮುಖಂಡ ಹಾಗೂ ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಮಣಿಕಂಠ ರಾಥೋಡ್ ಅವರ ಮೇಲೆ ಸಚಿವ ಪ್ರಿಯಾಂಕ್​ ಖರ್ಗೆ ಜನ ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಕೂಡಲೇ ಮುಖ್ಯಮಂತ್ರಿಯವರು ಈ ರೀತಿಯ ದುರ್ವರ್ತನೆ ತೋರಿರುವ ಸಚಿವ ಪ್ರಿಯಾಂಕ್​ ಖರ್ಗೆ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸ್ಥಿತಿ ನೋಡಲು ಚುನಾವಣೆವರೆಗೆ ಕಾಯಿರಿ:ಮೈಸೂರಿನ ಬಿಜೆಪಿ ಕಛೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಪರಿಸ್ಥಿತಿ ಕಾದು ನೋಡಿ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಾಂಗ್ರೆಸ್​ನಲ್ಲಿ ಇರುವ ಅಸಮಾಧಾನ ಎಲ್ಲರಿಗೂ ಗೊತ್ತು. ಲೋಕಸಭಾ ಚುನಾವಣೆವರೆಗೆ ಕಾದು ನೋಡಿ, ಆನಂತರ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಆ ಕಾಲ ಬಹಳ ಹತ್ತಿರ ಇದೆ ಎಂದು ತಿರುಗೇಟು ನೀಡಿದರು.

ನಮ್ಮ ಪಕ್ಷದಲ್ಲಿ ಒಂದಿಷ್ಟು ಅಸಮಾಧಾನ ಇರುವುದು ನಿಜ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ನಾನು ಮಾಡುತ್ತೇನೆ. ಶೀಘ್ರವೇ ಹಿರಿಯ ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತೇನೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಸಚಿವ ಜಮೀರ್ ರಾಜೀನಾಮೆ ಪಡೆಯಿರಿ:ರಾಜ್ಯ ಸರ್ಕಾರದ ಸಚಿವರ ಕಾರ್ಯವೈಖರಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಮಾತೆತ್ತಿದರೆ ಸಂವಿಧಾನ, ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ನಿಜವಾಗಿಯೂ ಪ್ರಜಾಪ್ರಭುತ್ವದ ವಿರೋಧಿಗಳು, ದಲಿತ ವಿರೋಧಿಗಳು ಎಂಬುದನ್ನು ಸಚಿವ ಜಮೀರ್ ಅಹ್ಮದ್ ಹೇಳಿಕೆ ನೋಡಿದರೆ ಗೊತ್ತಾಗುತ್ತದೆ. ಸಚಿವ ಜಮೀರ್ ಅಹ್ಮದ್ ಹೇಳಿಕೆಯನ್ನು ಸಿಎಂ ಆಗಲಿ, ಡಿಸಿಎಂ ಆಗಲಿ ವಿರೋಧಿಸಿಲ್ಲ. ಕೂಡಲೇ ಸಿಎಂ ಸಚಿವ ಜಮೀರ್ ಅಹ್ಮದ್ ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿದರು.

ಚುನಾವಣೆ ವೇಳೆ ಹಲವಾರು ಭರವಸೆಗಳನ್ನು ನೀಡಿ 135 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ನಂತರ ಜನರ ಭಾವನೆಯ ವಿರುದ್ಧ ಕೆಲಸ ಮಾಡುತ್ತಿದೆ. ಚುನಾವಣೆ ನಂತರ ಸಿಎಂ ಅವರನ್ನು ಕೆಳಗಿಳಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದು, ಡಿ ಕೆ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಸಾಕಷ್ಟು ಜನ ಮುಂದಾಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ. ಇನ್ನು ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿಲ್ಲ. ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಮಾತೆತ್ತಿದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರ್ಕಾರದ ಕೆಲಸವಾಗಿದೆ. ಇದು ರೈತ ವಿರೋಧಿ, ಬಡವರ ವಿರೋಧಿ ಸರ್ಕಾರ ಎಂದು ಬಿ ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುವ ಗುರಿ: ರಾಜ್ಯದಲ್ಲಿ ನನ್ನ ಗುರಿ ಪಕ್ಷ ಸಂಘಟನೆ ಮಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನಗಳನ್ನು ಗೆಲ್ಲವುದಾಗಿದೆ. ಆ ಮೂಲಕ ಮೋದಿಯವರ ಕೈಯನ್ನು ಬಲಪಡಿಸಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಆದರೆ ಮುಂದೆ ಬರುವ ಯಾವುದೇ ಚುನಾವಣೆಯಾದರೂ ಮಹತ್ವದಿಂದ ಎದುರಿಸಬೇಕಾಗಿದ್ದು, ಅದಕ್ಕಾಗಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ನನ್ನನ್ನು ರಾಜಕೀಯವಾಗಿ ಗುರುತಿಸಿದ್ದು, ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ. ಹಳೇ ಮೈಸೂರು ಭಾಗಕ್ಕೆ ಪ್ರಥಮ ಆದ್ಯತೆ ಎಂದು ಇದೇ ಸಂದರ್ಭದಲ್ಲಿ ಬಿ ವೈ ವಿಜಯೇಂದ್ರ ಹೇಳಿದರು.

ಶಾಸಕ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನ ಮಾಡುತ್ತೇನೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಮಾಧ್ಯಮಗೋಷ್ಠಿಗೂ ಮುನ್ನ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಮನೆಗೆ ಭೇಟಿ ನೀಡಿ ಬಿ ವೈ ವಿಜಯೇಂದ್ರ ಆಶೀರ್ವಾದ ಪಡೆದರು.

ಇದನ್ನೂ ಓದಿ: ನನಗೆ ರಾಜಾಧ್ಯಕ್ಷ ಸ್ಥಾನ ನೀಡಿ ಟಿ20 ಮ್ಯಾಚ್ ​ಆಡಲು ಅವಕಾಶ ಮಾಡಿಕೊಟ್ಟಿದ್ದಾರೆ: ಬಿ ವೈ ವಿಜಯೇಂದ್ರ

Last Updated : Nov 20, 2023, 3:37 PM IST

ABOUT THE AUTHOR

...view details