ಮೈಸೂರು: ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರು ವಿಜಯನಗರ ರಚನೆ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಬಳ್ಳಾರಿ ದೊಡ್ಡ ಜಿಲ್ಲೆ, ವಿಜಯನಗರ ಜಿಲ್ಲೆ ಮಾಡುವುದರಿಂದ ಜನರಿಗೆ ಅನುಕೂಲವೇ ಆಗಲಿದೆ ಎಂದರು.
ರಾಜ್ಯ ಸರ್ಕಾರ ರಚನೆಗೆ 17 ಜನರ ಸಹಕಾರದ ಜೊತೆ, 105 ಮಂದಿಯ ಶ್ರಮವೂ ಇದೆ. ಐದಾರು ಬಾರಿ ಶಾಸಕರಾಗಿ ಸಚಿವರಾಗದೇ ಇದ್ದವರು ಕೂಡ ಇದ್ದಾರೆ. ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಪುಟ ವಿಚಾರವಾಗಿ ಸಂಸದ ಶ್ರೀನಿವಾಸ ಪ್ರಸಾದ್ ಬೇಸರಗೊಂಡಿದ್ದಾರೆ. ಅವರ ಮನೆಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.