ವಿಧಾನ ಸೌಧ ಒಂದು ರೀತಿ ಮಾಲ್ ಆಗಿದ್ದು, ಅದಕ್ಕೆ ಜನರು ವಿಧಾನ ಸೌಧಕ್ಕೆ ದುಡ್ಡು ಹಿಡಿದುಕೊಂಡು ತಿರುಗಾಡುತ್ತಾರೆ ಎಂದ ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಮೈಸೂರು:ವಿಧಾನಸೌಧ ಒಂದು ರೀತಿ ಮಾಲ್ ಆಗಿದೆ. ಅಲ್ಲಿ ಏನು ಬೇಕಾದರೂ ಕೊಂಡುಕೊಳ್ಳಬಹುದು. ಅದಕ್ಕೆ ಜನರು ವಿಧಾನ ಸೌಧಕ್ಕೆ ದುಡ್ಡು ಹಿಡಿದುಕೊಂಡು ತಿರುಗಾಡುತ್ತಾರೆ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದ ಗೇಟ್ನಲ್ಲಿ ಪಿ ಡಬ್ಲ್ಯೂಡಿ ಇಲಾಖೆಯ ಕಿರಿಯ ಇಂಜಿನಿಯರ್ ಬ್ಯಾಗ್ನಲ್ಲಿ 10 ಲಕ್ಷ ಹಣ ಸಿಕ್ಕಿದ್ದರ, ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧ ಒಂದು ರೀತಿ ಮಾಲ್ ಆಗಿ ಹೋಗಿದೆ, ಅಲ್ಲಿಗೆ ಜನ ದುಡ್ಡು ಹಿಡಿದುಕೊಂಡು ಹೋದರೆ ಏನು ಬೇಕಾದರು ಕೊಂಡುಕೊಳ್ಳಬಹುದು ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಬೆಂಗಳೂರು ಹಾಗೂ ಮೈಸೂರು ನಡುವಿನ ದಶಪಥ ಹೆದ್ದಾರಿಯನ್ನು ಪರಿಶೀಲನೆ ಮಾಡುತ್ತಿರುವುದು ಸರಿಯಾಗಿದೆ, ಏನಾದರೂ ಲೋಪ ಕಂಡು ಬಂದರೆ ಮತ್ತೆ ಸರಿಪಡಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್ ಡಿ. ಕುಮಾರಸ್ವಾಮಿ ಹಿಟ್ ಅಂಡ್ ರನ್ ರೀತಿ ಹೇಳಿಕೆ ನೀಡಬಾರದು : ಹೆಚ್.ಡಿ.ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿ ಎರಡು ಬಾರಿ ಅಧಿಕಾರ ನಡೆಸಿದ್ದಾರೆ ಮತ್ತು ರಾಜಕೀಯ ಇತಿಹಾಸದ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರು ಮುಖ್ಯಮಂತ್ರಿ ಆಗಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಬಾಂಬೆಗೆ 17 ಜನ ಯಾವುದೋ ಹೆಣ್ಣುಮಕ್ಕಳ ಜೊತೆ ಹೋಗಿ ಮೋಜು ಮಸ್ತಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಯಾರು ಕಳುಹಿಸಿದರು, ಎಷ್ಟು ಜನ ಹೆಣ್ಣು ಮಕ್ಕಳು ಇದ್ದರು ಎಂಬ ಬಗ್ಗೆ ಗೊತ್ತಿದ್ದರೆ ಹೇಳಲಿ, ವೃಥಾ ಆರೋಪ ಮಾಡುವುದು ಮುಖ್ಯಮಂತ್ರಿ ಆಗಿದ್ದ ವ್ಯಕ್ತಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
17 ಜನ ಯಾಕೆ ಹೋದರು?:ನೀವೇ ಮುಖ್ಯಮಂತ್ರಿ ಆಗಿದ್ದ ಆ ಸಂದರ್ಭದಲ್ಲಿ ಸಮನ್ವಯ ಸಾಧಿಸುವುದರಲ್ಲಿ ನೀವು ವಿಫಲರಾಗಿದ್ದೀರಿ. ಅಷ್ಟೇ ವೇಳೆ ಅಂದು ನೀವು ತೋರಿದ ದುರಹಂಕಾರ , ನೀವು ಬೆರೆಯವರನ್ನು ನೋಡುವ ರೀತಿಯಿಂದ ಆ ಎಲ್ಲ ಶಾಸಕರು ನಿಮ್ಮನ್ನ ಬಿಟ್ಟು ಹೋದರು. ನೀವು ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮೂರು ವರ್ಷದ ನಂತರ ಬಾಂಬೆಗೆ ಹೋಗಿರುವುದರ ಬಗ್ಗೆ ನನಗೆ ಗೊತ್ತು ಎಂದು ಹೇಳುತ್ತೀರಿ. ಹಾಗಾದರೆ ಆ ಹೆಣ್ಣು ಮಕ್ಕಳು ಯಾರು, ಎಲ್ಲಿಂದ ಬಂದರು, ಅವರನ್ನು ಕಳುಹಿಸಿದವರು ಯಾರು ಎಂದು ಹೇಳಿ ಎಂದು ಸವಾಲು ಕೂಡಾ ಹಾಕಿದರು.
ನೀವು ಸಿನಿಮಾ ರೀತಿಯಲ್ಲಿ ಹೇಳಿಕೆ ಕೊಡಬೇಡಿ ನಾನು 17 ಜನರ ಜೊತೆ ಇದ್ದವನು, ನಾನು ಕೂಡ ಲೀಡ್ ಮಾಡಿದ್ದೇನೆ, ನೀವು ಹೇಳಿದ ರೀತಿಯಲ್ಲಿ ಬಾಂಬೆಯಲ್ಲಿ ಏನು ಆಗಿಲ್ಲ. ಅದೆಲ್ಲ ಸುಳ್ಳು, ಸತ್ಯ ಗೊತ್ತಿದ್ದರೆ ವಿವರವಾಗಿ ಹೇಳಿ. ಅದನ್ನ ಬಿಟ್ಟು ಯಾರದ್ದೋ ಮಾತನ್ನು ಕೇಳಿ ಈ ರೀತಿ ಮಾತು ಆಡಬಾರದು ಎಂದು ಹೇಳಿದರು. ನೀವು ಈ ವಿಚಾರದಲ್ಲಿ ನಿಮಗೆ ಗೊತ್ತಿರುವ ವಿಚಾರವನ್ನು ಡಿಟೇಲ್ ಆಗಿ ಹೇಳಿ, ಅದನ್ನ ಬಿಟ್ಟು ಹಿಟ್ ಅಂಡ್ ರನ್ ರೀತಿಯಲ್ಲಿ ಹೇಳಿಕೆ ನೀಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ :ಶಾಪ ವಿಮೋಚನೆ ಮಾಡಿ, ಸರ್ಕಾರದಲ್ಲಿ ಜವಾಬ್ದಾರಿ ಕೊಡಿ; ಎಚ್. ವಿಶ್ವನಾಥ್