ಮೈಸೂರು: ಸರಳ ದಸರಾ ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಸರಳ ದಸರಾ ವಿರೋಧಿಸಿದ ವಾಟಾಳ್ ನಾಗರಾಜ್ ಪೊಲೀಸರ ವಶಕ್ಕೆ ವಾಟಾಳ್ ಅವರು, ಜಂಬೂ ಸವಾರಿಯನ್ನು ನಡೆಸದ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ನಗರದ ಅಶೋಕ ರಸ್ತೆಯ ಪುರಭವನದ ಎದುರು ವಿನೂತನ ಚಳವಳಿ ನಡೆಸಲು ಮುಂದಾಗಿದ್ದರು. ಅಷ್ಟರಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಬಂದು ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.
ಪ್ರತಿಭಟನೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ರಾಜ್ಯ ಸರ್ಕಾರ ಜಂಬೂಸವಾರಿಯನ್ನು ಅರಮನೆ ಒಳಗೆ ಬಂಧಿಸಿದೆ. ಈಗ ನಾನು ಮೈಸೂರು ಪರಂಪರೆಯನ್ನು ಉಳಿಸಲು ಮಾಡಲು ಹೊರಟಿರುವ ಪಯತ್ನಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರಿಗೆ ಜೈಲಿಗೆ ಹೋಗಿ ಬಂದರೂ ಇನ್ನೂ ಬುದ್ದಿ ಬಂದಿಲ್ಲ. 'ಯಡಿಯೂರಪ್ಪರವರೇ ನಿಮ್ಮ ದರ್ಪ ಬಿಡಿ, ನಾನು ನಿಮ್ಮ ನೀತಿ ವಿರೋಧಿಸುತ್ತೇನೆ. ನಾನು ಪೊಲೀಸರ ಪರ. ನಿಮಗೆ ಗೌರವ ಮತ್ತು ಪೊಲೀಸ್ ಬಗ್ಗೆ ಪ್ರೀತಿ ಇದ್ದರೆ ಔರಾದ್ಕರ್ ವರದಿ ಜಾರಿ ಮಾಡಿ. ನೀವು ಅಧಿಕಾರದಿಂದ ಕೆಳಗೆ ಇಳಿದರೆ ನಿಮ್ಮನ್ನು ಒಂದು ಬೀದಿ ನಾಯಿ ಸಹಾ ಏನನ್ನೂ ಕೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಕೇಂದ್ರ ಸರ್ಕಾರ 50 ಸಾವಿರ ಕೋಟಿ ಪರಿಹಾರ ನೀಡಿ ನೊಂದವರಿಗೆ ನೆರಳಾಗಬೇಕು ಎಂದು ಒತ್ತಾಯಿಸಿದರು.