ಮೈಸೂರು :ಮೈಸೂರು ಗುಂಬಜ್ ಮಾದರಿ ಬಸ್ ನಿಲ್ದಾಣ ವಿಚಾರದಲ್ಲಿ ಸಂಸದ, ಶಾಸಕರ ಕಿತ್ತಾಟವನ್ನು ಅವಿವೇಕಿಗಳ ಜಗಳ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹಗೆ ತಲೆನೂ ಇಲ್ಲ ಬುದ್ಧಿನೂ ಇಲ್ಲ. ಅತ್ಯಂತ ಸಣ್ಣ ವ್ಯಕ್ತಿ. ಕೆಲಸ ಮಾಡುವುದನ್ನು ಬಿಟ್ಟು ಒಂದಲ್ಲ ಒಂದು ರಗಳೆ ತೆಗೆಯುತ್ತಿದ್ದಾರೆ. ಇತ್ತೀಚಿಗೆ ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನು ಬದಲಾಯಿಸಿ, ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಟ್ಟರು. ಹೆಸರು ಬದಲಾಯಿಸಿದ ತಕ್ಷಣ ಮೈಸೂರು ಆಕಾಶಕ್ಕೆ ಹೊರಟು ಹೋಯ್ತಾ? ಎಂದು ಪ್ರಶ್ನಿಸಿದರು.
ಮೈಸೂರು ಹಾಗೂ ರೈಲ್ವೆ ನಿಲ್ದಾಣ ಹಾಗೆ ಉಳಿದಿದೆ. ಬಸ್ ನಿಲ್ದಾಣದಲ್ಲಿನ ಗುಂಬಜ್ ತೆಗೆದಿದ್ದು ಸರಿಯಲ್ಲ. ತಲೆಗೊಂದು ಟೋಪಿ ಹಾಕಿ ಲಾಂಗ್ ಕೋಟ್ ಹಾಕೊಂಡ್ ಬಂದ್ರೆ ನಾನು ಮುಸಲ್ಮಾನ ಆಗಿ ಬಿಡ್ತಿನಾ?. ಇದು ಸಣ್ಣತನ, ಅವಿವೇಕತನ. ಇದರಿಂದ ಮೈಸೂರಿಗೆ ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸುಳ್ಳು ಬರೆದು ಜನರನ್ನು ಹಾದಿ ತಪ್ಪಿಸುವುದು ಸರಿಯಲ್ಲ: ಟಿಪ್ಪು ನಿಜ ಕನಸುಗಳು ನಾಟಕ ವಿಚಾರವಾಗಿ ಮಾತನಾಡಿ, ಅಡ್ಡಂಡ ಕಾರ್ಯಪ್ಪ ಅವರೇ ನೀವು ಪುಸ್ತಕದಲ್ಲಿ ಬರೆದಿದ್ದು ನಿಜವೇ? ಹೀಗೆ ಸುಳ್ಳು ಬರೆದು ಜನರನ್ನು ಎತ್ತಿ ಕಟ್ಟುವುದರಿಂದ ಬಡತನ ನಿವಾರಣೆಯಾಗುತ್ತದಾ?. ಸುಳ್ಳು ಬರೆದು ಜನರನ್ನು ದಿಕ್ಕು ತಪ್ಪಿಸುವುದು ಒಳ್ಳೆಯದಲ್ಲ. ಕನ್ನಂಬಾಡಿ ಕಟ್ಟಬೇಕೆನ್ನುವುದು ಟಿಪ್ಪು ಕನಸಾಗಿತ್ತು. ಬೇಕಿದ್ದರೆ ಕನ್ನಂಬಾಡಿ ಬಾಗಿಲಿಗೆ ಹೋಗಿ ಶಾಸನ ಇದೆ ನೋಡಿ ಬರಲಿ ಎಂದು ಕಿಡಿಕಾರಿದರು.