ಮೈಸೂರು :ಟಾಂಗಾ ಗಾಡಿಯಲ್ಲಿ ಬರುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಜಯ ಚಾಮರಾಜೇಂದ್ರ ವೃತ್ತದ ಬಳಿಗೆ ಟಾಂಗಾದಲ್ಲಿ ಆಗಮಿಸಿ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಈಗಾಗಲೇ ಕೊರೊನಾದಿಂದ ತತ್ತರಿಸಿರುವ ಜನರಿಗೆ ಮತ್ತೆ ಹೊರೆ ಮಾಡುತ್ತಿದೆ. ರಾಜ್ಯಕ್ಕೆ ಅನುದಾನ ನೀಡುವಲ್ಲೂ ಅನ್ಯಾಯ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾದ ಸಂಸದರು ಭೂತ ಪ್ರೇತಗಳಾಗಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹರಿಹಾಯ್ದರು.
ಕನ್ನಡ ಚಳವಳಿ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ರಾಜ್ಯಕ್ಕೆ ಮೋಸ ಮಾಡಿರುವ ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಹರಾಜು ಹಾಕುತ್ತೇವೆ. ಯಾರು ಬೇಕಾದರೂ ಬಂದು ಹರಾಜಿನಲ್ಲಿ ಭಾಗವಹಿಸಬಹುದು. ಇನ್ನೊಂದು ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿಯಾಗುತ್ತದೆ. ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಪ್ಯಾಂಟ್, ಶಟ್೯ ಹರಾಜು ಕೂಗಬೇಕಾಗುತ್ತದೆ. ಇದು ಹಾಸ್ಯ ಅನಿಸಿದ್ರೂ ಮುಂದಿನ ಪರಿಸ್ಥಿತಿ ಇದೇ ರೀತಿ ಇರುತ್ತದೆ ಎಂದು ಹೇಳಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕರಾಳ ಕಾಯ್ದೆಯಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಬಿಡಿಎ ಸೈಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಮುಂದೆ ವಿಧಾನಸೌಧ ಮಾರಿದರು ಆಶ್ಚರ್ಯವಿಲ್ಲ. ಈ ಬಾರಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ.90ರಷ್ಟು ವಿದ್ಯಾರ್ಥಿಗಳು ಫೇಲ್ ಆಗ್ತಾರೆ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಹೇಳಿದೆ. ಆದರೆ, ಸುರೇಶ್ ಕುಮಾರ್ ತಮ್ಮದೇ ನಿಲುವಿನಲ್ಲಿ ಪರೀಕ್ಷೆ ನಡೆಸ್ತಿದ್ದಾರೆ. ವಿದ್ಯಾರ್ಥಿಗಳು ಫೇಲ್ ಆದರೆ ಸುರೇಶ್‌ಕುಮಾರ್ ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.