ಮೈಸೂರು: ಸೋಮವಾರ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಹಾಗೂ ಎರಡು ಕ್ಷೇತ್ರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿಯ ವರುಣಾ ಕ್ಷೇತ್ರದ ಹಾಗೂ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ, ಮೊದಲ ಬಾರಿಗೆ ನಾನು ಮೈಸೂರಿಗೆ ಆಗಮಿಸಿದ್ದು, ಮೊದಲು ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು, ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದೇನೆ ಎಂದು ಹೇಳಿದರು. ಸೋಮವಾರ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 19 ರಂದು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದ ಸೋಮಣ್ಣ, ವರುಣಾ ಕ್ಷೇತ್ರಕ್ಕೆ ನಾನು ನೆಪ ಮಾತ್ರ, ನನ್ನ ಕಾರ್ಯಕರ್ತರ, ಮುಖಂಡರು, ಪಕ್ಷದ ಶಕ್ತಿ ಆಗಿದ್ದಾರೆ. ಇಲ್ಲಿ ಯಾವುದೇ ಭಿನ್ನಮತ ಎಂಬ ಮಾತು ಇಲ್ಲ. ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತಾರೆ ಎಂದು ಸೋಮಣ್ಣ ಹೇಳಿದರು.
ಇಂದು ಸಂಜೆ ವೇಳೆಗೆ ಗೊವಿಂದರಾಜನಗರ ಟಿಕೆಟ್ ವಿಚಾರ ಬಗೆಹರಿಯುತ್ತದೆ. ಆ ವಿಚಾರವನ್ನು ದೊಡ್ಡದು ಮಾಡಬೇಡಿ ಎಂದ ಸೋಮಣ್ಣ, 75 ವರ್ಷ ಆದ ಮೇಲೆ ಪಕ್ಷದಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ಗೊತ್ತು. ಇದು ನನ್ನ ಕೊನೆ ಚುನಾವಣೆ. ರಾಜಕೀಯ ನಿವೃತ್ತಿ ಎಂಬುದು ನನಗಿಲ್ಲ. ಪಕ್ಷದ ವ್ಯವಸ್ಥೆಯ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು. ಸಿದ್ದರಾಮಯ್ಯ ವಿರುದ್ಧದ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮತ್ತು ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಬೆಳೆದವರು. ಅವರು ಎಂತಹ ನಾಯಕರಾದರು ಕೂಡ ವರುಣಾದಲ್ಲಿ ನನ್ನಂತೆ ಅವರು ಸಹ ಅಭ್ಯರ್ಥಿ ಅಷ್ಟೇ ಎಂದರು.
ಇದನ್ನೂ ಓದಿ:ಹಾವೇರಿ, ಹಾನಗಲ್ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟ.. ಕೈ ತಪ್ಪಿದ್ದಕ್ಕೆ ಸಿಎಂ ವಿರುದ್ಧ ಓಲೇಕಾರ್ ಗಂಭೀರ ಆರೋಪ