ಮೈಸೂರು : ವರುಣಾ ಕ್ಷೇತ್ರವನ್ನು ಒಬ್ಬ ಮುಖ್ಯಮಂತ್ರಿ ಕ್ಷೇತ್ರ ಎಂದು ಹೇಳಿದರೆ ನಾನೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಸಿದ್ದರಾಮಯ್ಯಗೆ ಸವಾಲು ಹಾಕಿದರು.
ವರುಣಾ ವಿಧಾನಸಭಾ ಕ್ಷೇತ್ರದ ಕಾರ್ಯ ಗ್ರಾಮದಲ್ಲಿ ಮಾತನಾಡಿದ ಅವರು, ತುಂಬಾ ವರ್ಷಗಳಿಂದ ಈ ಕ್ಷೇತ್ರದ ಜನರು ನೋವನ್ನು ಅನುಭವಿಸುತ್ತಿದ್ದಾರೆ. ನನ್ನನ್ನು ವರುಣಾ ಕ್ಷೇತ್ರಕ್ಕೆ ಯಾಕೆ ಹೋದ್ರಿ ಎಂದು ಕೇಳುತ್ತಾರೆ? ಸಿದ್ದರಾಮಯ್ಯ ಅವರು ಕೊಪ್ಪಳ ಬಾದಾಮಿಗೆ ಯಾಕೆ ಹೋಗಿದ್ರು? 13 ಸಾರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದರು. ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಹಣಕಾಸಿನ ಸಚಿವರು ಕೂಡ ಅವರೇ ಆಗಿದ್ದರು. ಈ ವರುಣಾ ಕ್ಷೇತ್ರವನ್ನು ಒಬ್ಬ ಮುಖ್ಯಮಂತ್ರಿ ಆಗಿದ್ದವರ ಕ್ಷೇತ್ರ ಅಂತಾ ಯಾರಿಗೂ ಅನ್ನಿಸಲ್ಲ ಎಂದರು.
ಇದನ್ನೂ ಓದಿ:ಕೇಂದ್ರದ ಯೋಜನೆಗಳಲ್ಲಿ ಮುಸಲ್ಮಾನರನ್ನು ಹೊರಗಿಟ್ಟಿದ್ದು ತೋರಿಸಿದರೆ ರಾಜಕೀಯ ನಿವೃತ್ತಿ: ರಾಜೀವ್ ಚಂದ್ರಶೇಖರ್ ಸವಾಲು
ನನಗೆ ಐದು ವರ್ಷ ಅವಕಾಶ ಕೊಡಿ: ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಎಲ್ಲವೂ ಸರಿಯಾಗಿದೆ. ನೂರಕ್ಕೆ ನೂರರಷ್ಟು ಕೆಲಸಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂದು ಮತದಾರರು ಹೇಳಿದರೆ ನಾನು ಇಲ್ಲಿಂದ ಕೈಮುಗಿದು ಹೊರಟು ಹೋಗುತ್ತೇನೆ. ಸಿದ್ದರಾಮಯ್ಯ ಮನಸು ಮಾಡಿದರೆ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ನನಗೆ ಬೇಕಾಗಿರುವುದು ಮುಖ್ಯಮಂತ್ರಿ ಸ್ಥಾನ ಅಲ್ಲ, ಆ ಕ್ಷೇತ್ರದ ಅಭಿವೃದ್ಧಿ ಎಂದು ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್ ನೀಡಿದ್ರು. ವರುಣಾ ಕ್ಷೇತ್ರ ಮತ್ತೊಂದು ಗೋವಿಂದ ನಗರ ಆಗಬೇಕು. ಅದಕ್ಕೋಸ್ಕರ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. 15 ವರ್ಷ ಅವರಿಗೆ ಕೊಟ್ಟಿದ್ದೀರಿ. ನನಗೆ ಐದು ವರ್ಷ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಸೋಮಣ್ಣ ಬೇಡಿಕೊಂಡಿದ್ದಾರೆ.