ಕರ್ನಾಟಕ

karnataka

By

Published : May 7, 2023, 6:53 PM IST

ETV Bharat / state

ವರುಣ ಕ್ಷೇತ್ರವನ್ನು ಚಿನ್ನದ ತಕ್ಕಡಿಯಲ್ಲಿ ತೂಗುವಂತೆ ಮಾಡಬಹುದಿತ್ತು: ವಿ. ಸೋಮಣ್ಣ

ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.

ವಿ.ಸೋಮಣ್ಣ
ವಿ.ಸೋಮಣ್ಣ

ಮೈಸೂರು: ವರುಣ ಕ್ಷೇತ್ರದಲ್ಲಿ ಎರಡು ಬಾರಿ ಸಿದ್ದರಾಮಯ್ಯ, ಅವರ ಮಗ ಡಾ. ಯತೀಂದ್ರ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರವನ್ನು ಚಿನ್ನದ ತಕ್ಕಡಿಯಲ್ಲಿ ತೂಗುವಂತೆ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಮತ ಪಡೆದ ತಂದೆ-ಮಗ ಕ್ಷೇತ್ರವನ್ನು ಮರೆತರು ಎಂದು ವಿ. ಸೋಮಣ್ಣ ಆರೋಪಿಸಿದ್ದಾರೆ. ನಗರದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೀಗ ಚಾಮುಂಡೇಶ್ವರಿ, ಮಹದೇಶ್ವರ ನನ್ನನ್ನು ನಿಮ್ಮ ಕ್ಷೇತ್ರಕ್ಕೆ ಕಳುಹಿಸಿದ್ದಾರೆ. ಸೋಲುವ ಭಯದಿಂದ ಸಿದ್ದರಾಮಯ್ಯ ಭೀತಿಯ ವಾತಾವರಣ ಮೂಡಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಕನಸು. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ. ಸೋಮಣ್ಣ ಬಂದ ಮೇಲೆ ಏನೋ ಆಗುತ್ತದೆ ಎನ್ನುವ ಭಯ ಅವರಿಗೆ ಶುರುವಾಗಿದೆ ಎಂದರು.

ಅವರಿಗಿಂತ ಮುಂಚೆ ನಾನೂ ಕಾಂಗ್ರೆಸ್​ನಲ್ಲಿದ್ದೆ. ನಾನು ಬಂದ ಮೇಲೆ ಅವರು ಕಾಂಗ್ರೆಸ್​ಗೆ ಸೇರಿದ್ದು. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ ಸ್ಪರ್ಧೆಯ ವೇಳೆ ನಾನು ಅವರ ಪರ ಪ್ರಚಾರ ಮಾಡಿದ್ದೇನೆ. ಆದರೆ, ಇಂದು ನನ್ನ ಬಗ್ಗೆಯೇ ಅವರು ಹಗುರವಾಗಿ ಮಾತನಾಡುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ನಾನು ತುಂಬಾ ಬಡ ಕುಟುಂಬದಿಂದ ಬಂದವನು, ನನ್ನ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇದ್ದವರಲ್ಲ. ನನ್ನ ಜೀವನದಲ್ಲಿ ಅಧಿಕಾರಕ್ಕೆ ಆಸೆ ಪಟ್ಟವನಲ್ಲ, ಅಧಿಕಾರ ಎಂದೂ ಶಾಶ್ವತವಲ್ಲ. ಪ್ರತಿಯೊಂದು ಸಹ ಇಚ್ಛಾ ಶಕ್ತಿ, ನಾನು ಮತ್ತು ನನ್ನ ಪ್ರತಿಸ್ಪರ್ಧಿ ಒಟ್ಟಿಗೆ ಕೆಲಸ ಮಾಡಿದವರು. ಆದರೀಗ ಇಬ್ಬರು ಒಂದೇ ಕಡೆ ಸ್ಪರ್ಧೆ ಮಾಡುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.

ಇದೇ ವೇಳೆ, ವರುಣ ಕ್ಷೇತ್ರದ ರಸ್ತೆಗಳನ್ನು ನೋಡಿದರೆ ದಿಗಿಲಾಗುತ್ತದೆ. ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯ. ನನ್ನನ್ನು ಗೆಲ್ಲಿಸಿದರೇ ಅಭಿವೃದ್ಧಿ, ಮೂಲಭೂತ ಸೌಲಭ್ಯಕ್ಕೆ ಒತ್ತು, ಶಾಂತಿ ಮತ್ತು ನೆಮ್ಮದಿಗೆ ಆದ್ಯತೆ ನೀಡುತ್ತೇನೆ. ಅದಕ್ಕಾಗಿಯೇ ನಮ್ಮ ನಾಯಕರು ನನ್ನನ್ನು ಗೋವಿಂದರಾಜನಗರದಂತೆ ವರುಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕಳುಹಿಸಿದ್ದಾರೆ. ಪರಮೇಶ್ವರ್​, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏನು ಮಾಡಿದ್ದೀರಿ, ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಪರಮೇಶ್ವರ್​, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್​ ಏಕೆ ಬಂದಿಲ್ಲ ಎಂದು ಸೋಮಣ್ಣ ಪ್ರಶ್ನಿಸಿದ್ರು.

ನಾನು ಹರಕೆಯ ಕುರಿಯಲ್ಲ. ಎಂ.ಬಿ. ಪಾಟೀಲ್ ಸಿದ್ದರಾಮಯ್ಯ ಅವರ ಓಲೈಕೆಗಾಗಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ದುಷ್ಟ ಶಕ್ತಿಯ ನಿಗ್ರಹಕ್ಕೆ ಎಲ್ಲಾ ಶಕ್ತಿಗಳು ಒಂದಾಗುತ್ತವೆ. ಅವರು 15 ವರ್ಷ ಅಧಿಕಾರ ಮಾಡಿದ್ದು ಸಾಕು ಎಂದ ಅವರು, ಡಾ. ರಾಜ್‌ಕುಮಾರ್ ಅವರ ಕುಟುಂಬದ ಬಗ್ಗೆ ಗೌರವ ಇದೆ. ಆದರೆ, ಶಿವರಾಜ್​ ಕುಮಾರ್​ ಪ್ರಚಾರ ಮಾಡಿದ್ದು ಬೇಸರವಿದೆ. ನಿಮಗೆ ಸೋಲಿನ ಭಯ ಕಾಡುತ್ತಿದೆ ಅನ್ನುವುದಕ್ಕಿಂತ ನೀವು ವರುಣ ಜನರಿಗೆ ಏನು ಮಾಡಿಲ್ಲ. ಅದಕ್ಕಾಗಿ ಎಲ್ಲರನ್ನೂ ಕರೆದು ತರುತ್ತಿದ್ದೀರಾ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನನಗೆ ಅವಕಾಶ ಕೊಡಿ ಎಂದು ಸೋಮಣ್ಣ ಮನವಿ ಮಾಡಿದರು.

ಇದನ್ನೂ ಓದಿ:ಫುಡ್​ ಡಿಲೇವರಿ ಬಾಯ್ ದ್ವಿಚಕ್ರ ವಾಹನದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ರಾಹುಲ್ ಗಾಂಧಿ​ ಸಂಚಾರ

ABOUT THE AUTHOR

...view details