ಕರ್ನಾಟಕ

karnataka

ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು: ಯು.ಟಿ.ಖಾದರ್ ಆಕ್ರೋಶ

By

Published : Apr 20, 2020, 9:00 PM IST

ಬೆಂಗಳೂರಿನ ಪಾದರಾಯ‌ನಪುರದಲ್ಲಿ ನಿನ್ನೆ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಯು.ಟಿ.ಖಾದರ್, ಬಿಜೆಪಿಯವರು ಈ ಸಂದರ್ಭದಲ್ಲಿ ಒಂದು ಸಮುದಾಯವನ್ನು ಗುರಿ ಮಾಡುವ ಬದಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕೆಂದು ಹೇಳಿದರು.

UT Khader
ಯು.ಟಿ.ಖಾದರ್

ಮೈಸೂರು:ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವ ಬದಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮಾಜಿ ಸಚಿವ ಯು.ಟಿ.ಖಾದರ್

ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಪಾದರಾಯ‌ನಪುರದಲ್ಲಿ ನಡೆದ ಘಟನೆಯನ್ನು ಯಾರು ಸಮರ್ಥಿಸುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಇದನ್ನು ಬಿಟ್ಟು ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ. ಇಂತಹ ಸಂದರ್ಭ ಒದಗಿ ಬರಲಿದೆ ಎಂಬುದರ ಕುರಿತು ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಅದರ ಬಳಿ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿರುವ ಖಾದರ್‌, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಿ‌ ಎಂದಿದ್ದಾರೆ.

ಯಾರೂ ಸರ್ಕಾರದ ವಿರುದ್ಧ ಹೋಗುತ್ತಾರೋ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರವಿದೆ. ಆದ್ರೆ ಕಾನೂನು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿ, ಈಗ ಸಮುದಾಯದ ಮೇಲೆ ದೂರುವುದು ಸರಿಯಲ್ಲ. ಹೀಗೆ ದೂರುವುದಾದರೇ ಸರ್ಕಾರ ಯಾಕೆ ಬೇಕು. ಸಮುದಾಯದ ಮುಖಂಡರೇ ಸಾಕು ತಾನೇ? ಈ ರೀತಿಯ ಘಟನೆ ಇದೇ ಮೊದಲಲ್ಲ. 15 ದಿನಗಳ ಹಿಂದೆ ಈ ರೀತಿಯ ಘಟನೆ ನಡೆದಿದೆ. ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಸರಿಯಾಗಿ ಆಡಳಿತ ನಡೆಸಿದರೆ ಇಂತಹ ಕೃತ್ಯಗಳು ನಡೆಯುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಜಮೀರ್​​ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹಿಸಿರುವ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು. ಪ್ರತಿಯೊಂದರಲ್ಲೂ ಹೀಗೆ ರಾಜಕೀಯ ಮಾಡುತ್ತಾರೆ. ಇದರಲ್ಲಿ ಗೃಹ ಸಚಿವರ ತಪ್ಪಿದ್ದು, ಮೊದಲು ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕೊರೊನಾ ವೈರಸ್‌ ಹರಡುವ ಭೀತಿ ಇರುವುದರಿಂದ ದೇಶದ ಎಲ್ಲಾ ಜನರು ಸರ್ಕಾರದ ಆದೇಶಗಳನ್ನು ಚಾಚುತಪ್ಪದೆ ಪಾಲಿಸಬೇಕು. ಕೆಲ ಗೂಂಡಾಗಳ ವರ್ತನೆಯಿಂದ ಇಡೀ ಸಮುದಾಯವನ್ನು ವಿರೋಧಿಸಬಾರದು. ಎಲ್ಲರಿಗೂ ಕಾನೂನು ಒಂದೇ, ಎಲ್ಲ ಧರ್ಮದ ಗುರುಗಳು ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details