ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ ಮೈಸೂರು :ಮುಂದಿನ ವರ್ಷ ಆಷಾಢ ಮಾಸಕ್ಕೆ ಚಾಮುಂಡಿ ಬೆಟ್ಟಕ್ಕೆ ಬರುವ ಹೊತ್ತಿಗೆ ನರೇಂದ್ರ ಮೋದಿಯವರೇ 3ನೇ ಬಾರಿ ಪ್ರಧಾನ ಮಂತ್ರಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿಕೊಂಡಿದ್ದೇನೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆಯಾದ ಶೋಭಾ ಕರಂದ್ಲಾಜೆ ಹೇಳಿದರು.
ಚಾಮುಂಡೇಶ್ವರಿಯ ಪರಮ ಭಕ್ತೆಯಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಕಡೆಯ ಆಷಾಢ ಶುಕ್ರವಾರದಂದು ನಾಡದೇವತೆಯ ದರ್ಶನ ಪಡೆಯಲು ಆಗಮಿಸಿದ ಅವರು, ಚಾಮುಂಡಿ ಬೆಟ್ಟದ ಪಾದಗಳ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಬರಿಗಾಲಲ್ಲಿ ಹತ್ತಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತೇನೆ. ತಾಯಿ ಚಾಮುಂಡೇಶ್ವರಿ ಮಹಿಷಮರ್ಧಿನಿ, ದುಷ್ಟರ ಸಂಹಾರ ಮಾಡಿ ಶಿಷ್ಟರ ರಕ್ಷಣೆ ಮಾಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು 9 ವರ್ಷ ಅಧಿಕಾರಾವಧಿ ಪೂರೈಸಿದ್ದು. ಮುಂದಿನ ವರ್ಷ ಆಷಾಢ ಮಾಸಕ್ಕೆ ನಾನು ಬರುವ ಮುನ್ನ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ. ದೇಶದ ರಕ್ಷಣೆಗಾಗಿ, ಅಭಿವೃದ್ಧಿಗಾಗಿ ಇಡೀ ಪ್ರಪಂಚದಲ್ಲೇ ಭಾರತದ ಧ್ವಜವನ್ನು ಎತ್ತಿ ಹಿಡಿಯಲು ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಎಂದು ಆಷಾಡ ಶುಕ್ರವಾರವಾದ ಇಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಅಂತಾ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಸರ್ಕಾರ ಬಂದರೆ ಒಂದು ವರ್ಗದ ಓಲೈಕೆ : ಟಿ ನರಸೀಪುರದಲ್ಲಿ ಹತ್ಯೆ ಆಗಿರುವ ವೇಣುಗೋಪಾಲ್ ಹನುಮ ಜಯಂತಿಯಲ್ಲಿ ಪಾಲ್ಗೊಂಡಿದ್ದವರು. ಅವರು ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುತ್ತಿದ್ದವರು. ಅವರನ್ನು ಕಾಂಗ್ರೆಸ್ ಮುಖಂಡರು ಸಂಧಾನ ಮಾಡುವುದಾಗಿ ಕರೆಸಿ ಕೊಲೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದರೆ ಒಂದು ವರ್ಗದ ಪರವಾಗಿ ಅವರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಾರೆ ಎಂದು ನಾವು ಮೊದಲೇ ಹೇಳಿದ್ವಿ ಅಂತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ತುಂಬಾ ಕಡಿಮೆಯಾಗಿದ್ದು, ಬರ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರವರ ಕೆಲಸವನ್ನು ಮಾಡಬೇಕಾಗಿದೆ. ನೆರೆ ಮತ್ತು ಬರಗಾಲದಲ್ಲಿ ಜನರ ರಕ್ಷಣೆ ಮಾಡುವುದು ಸರ್ಕಾರದ ಕೆಲಸವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.
ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ಸಚಿವೆ :ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೈಸೂರಿಗೆ ಬಂದಾಗಲೆಲ್ಲ ಸಾಮಾನ್ಯವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಬಳಿಕ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುವುದು ಸಾಮಾನ್ಯ. ಆದರೆ ವರ್ಷದ ಶರನ್ನವರಾತ್ರಿ ಸಂದರ್ಭದಲ್ಲಿ ಆಯುಧ ಪೂಜೆಯ ದಿನ ಆಗಮಿಸಿ ಮೆಟ್ಟಿಲುಗಳ ಮೂಲಕ ಹತ್ತಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಾರೆ. ಜೊತೆಗೆ ಆಷಾಢ ಮಾಸದ ಸಂದರ್ಭದಲ್ಲೂ ಚಾಮುಂಡೇಶ್ವರಿ ತಾಯಿಯ ದರ್ಶನವನ್ನು ಮೆಟ್ಟಿಲುಗಳ ಮೂಲಕ ಹತ್ತಿ ಶೋಭಾ ಕರಂದ್ಲಾಜೆ ಅವರು ತಾಯಿಯ ದರ್ಶನವನ್ನು ಪಡೆಯುತ್ತಾರೆ.
ಓದಿ:ಗ್ಯಾರಂಟಿ ಯೋಜನೆಗಳನ್ನು ಘೋಷಿಸುವಾಗ ತಲೆಯಲ್ಲಿ ಮೆದುಳು ಇರಲಿಲ್ವಾ, ಸಗಣಿ ತುಂಬಿತ್ತಾ?: ಶೋಭಾ ಕರಂದ್ಲಾಜೆ