ಮೈಸೂರು:ಶನಿವಾರ, ಭಾನುವಾರ ಸುರಿದ ಗುಡುಗು ಸಹಿತ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಒಟ್ಟು 3 ಮಂದಿ ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅವರ್ತಿ ಗ್ರಾಮದ ಲೋಕೇಶ್ (55) ಎಂಬ ರೈತ ಭಾನುವಾರ ಸಂಜೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಡಿಲು ಸಹಿತ ಮಳೆಯಾಗಿದ್ದರಿಂದ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ದುರದೃಷ್ಟವಶಾತ್ ಲೋಕೇಶ್ ನಿಂತಿದ್ದ ಜಾಗಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಲೋಕೆಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಕುರಿತು ಬೈಲುಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ನೀಡಿದರು. ಮೃತರು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಿಡಿಲು ಬಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಸಾವು : ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಸಿಡಿಲಿಗೆ ಬಲಿಯಾಗಿರುವ ಮತ್ತೊಂದು ಘಟನೆ ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದ ಜಮೀನಿನಲ್ಲಿ ನಡೆದಿದೆ. ತಾಲೂಕಿನ ಬಿಳಿಕೆರೆ ಹೋಬಳಿಯ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್(42) ಮೃತರು. ಹರೀಶ್ ಶನಿವಾರ ರಾತ್ರಿ ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವೇಳೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಜೋರಾಗಿತ್ತು. ಹೀಗಾಗಿ ಜಮೀನಿನಲ್ಲಿದ್ದ ಗುಡಿಸಲ ಬಳಿ ಆಶ್ರಯ ಪಡೆದಿದ್ದರು. ಈ ವೇಳೆ ಸಿಡುಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎಷ್ಟೇ ಹೊತ್ತಾದರೂ ಹರೀಶ್ ಮನೆಗೆ ಮರಳದಿದ್ದರಿಂದ ಹೋಗಿ ನೋಡಿದ ವೇಳೆ ಸಿಡಿಲಿಗೆ ಬಲಿಯಾಗಿರುವುದು ಗೊತ್ತಾಗಿದೆ. ಗ್ರಾಮಸ್ಥರು ಬಿಳಿಕೆರೆ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಭಾನುವಾರ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೊಪ್ಪಿಸಲಾಗಿದೆ. ಮೃತ ಹರೀಶ್ ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ಶಾಸಕರ ಭೇಟಿ: ವಿಷಯ ತಿಳಿದ ಶಾಸಕ ಜಿ. ಡಿ. ಹರಿಶ್‌ಗೌಡ ಭೇಟಿ ನೀಡಿ, ವೈಯುಕ್ತಿಕವಾಗಿ ಸಹಾಯ ಮಾಡಿದ್ದಾರೆ. ಪ್ರಕೃತಿ ವಿಕೋಪದಡಿ ದೊರೆಯುವ ಪರಿಹಾರದ ಜೊತೆಗೆ ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ಸೌಲಭ್ಯ ದೊರಕಿಸಿಕೊಡುವಂತೆ ತಹಶಿಲ್ದಾರ್ ಡಾ. ಅಶೋಕ್ ಅವರಿಗೆ ಸೂಚಿಸಿದರು. ಈ ವೇಳೆ ಕಂದಾಯ ಇಲಾಖೆ ನಿರೀಕ್ಷಕ ನಂದೀಶ್, ಗ್ರಾಮಲೆಕ್ಕಿಗ ಸುಮಂತ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಉದಯ್, ಮುಖಂಡರಾದ ವಾಸೇಗೌಡ, ಕೆಂಪೇಗೌಡ ಮತ್ತಿತರರು ಜೊತೆಗಿದ್ದರು.
ವಿದ್ಯುತ್ ತಗುಲಿ ಓರ್ವ ಸಾವು, ಇಬ್ಬರು ಅಸ್ವಸ್ಥ: ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಲ್ಲಿ ಜಮೀನು ಉಳಿಮೆ ಕೆಲಸ ಮಾಡುವಾಗ ನೆಲದ ಮೇಲೆ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಯುವಕನೊಬ್ಬ ಮೃತಪಟ್ಟಿದ್ದಾನೆ. ಜೊತೆಗೆ ಅವನೊಂದಿಗಿದ್ದ ಇಬ್ಬರು ಅಸ್ವಸ್ಥಗೊಂಡಿರುವ ಘಟನೆ ಶನಿವಾರ ನಡೆದಿತ್ತು. ದೊಡ್ಡಕೊಪ್ಪಲು ಗ್ರಾಮದ ಸ್ವಾಮಿ (18) ಮೃತ ಯುವಕ ಹಾಗು ಹರೀಶ್(42) ಮತ್ತು ಸಂಜಯ್ (19) ಗಾಯಾಳುಗಳು ಎಂದು ತಿಳಿದು ಬಂದಿದೆ.
ಹರೀಶ್ ಎಂಬುವರು ಬಾರಸೆ ಗ್ರಾಮದ ದೇವರಾಜ ಅರಸ್ ಎಂಬುವರಿಗೆ ಸೇರಿದ ಜಮೀನನ್ನು ಬೇಸಾಯಕ್ಕೆ (ಲೀಸ್) ಮಾಡಿಕೊಂಡಿದ್ದರು. ಶನಿವಾರ ಹರೀಶ್ ಜೊತೆಯಲ್ಲಿ ಸ್ವಾಮಿ ಮತ್ತು ಸಂಜಯ್ ಉಳುಮೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಸಂಜೆ ಗಾಳಿ ಮಳೆಗೆ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಮೂರು ಜನ ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್ ಪ್ರವೇಶಿಸಿದ ಪರಿಣಾಮ ಸ್ಥಳದಲ್ಲಿಯೇ ಸ್ವಾಮಿ ಎಂಬ ಯುವಕ ಮೃತಪಟ್ಟಿದ್ದಾನೆ. ಯುವಕರಿಬ್ಬರು ಅಸ್ವಸ್ಥಗೊಂಡಿದ್ದಾರೆ. ಸ್ವಾಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಗಾಯಗೊಂಡಿದ್ದವರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಾಯಿಯಿಂದ ಪೊಲೀಸ್ ಠಾಣೆಗೆ ದೂರು: ಗಾಳಿ ಮಳೆಯಿಂದಾಗಿ ಜಮೀನಿನ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಪಕ್ಕಕ್ಕೆ ಸರಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ನನ್ನ ಮಗ ಮೃತಪಟ್ಟಿದ್ದಾನೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಜರುಗಿಸಬೇಕು ಎಂದು ಮೃತ ವ್ಯಕ್ತಿಯ ತಾಯಿ ಯಶೋದಮ್ಮ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಸ್ಕೂಟಿ ಮೇಲೆ ಮರ ಬಿದ್ದು ವ್ಯಕ್ತಿ ಸಾವು; ಇಬ್ಬರು ವಿದ್ಯಾರ್ಥಿಗಳು ನದಿ ನೀರುಪಾಲು