ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಬೃಹತ್ ಗಾತ್ರದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.
ಅರಸಿನಕೆರೆಯಲ್ಲಿ ಪತ್ತೆಯಾದ ಎರಡು ನಂದಿ ವಿಗ್ರಹ ಇವುಗಳಲ್ಲಿ ಒಂದು ನಂದಿ ವಿಗ್ರಹವು 15 ಅಡಿ ಉದ್ದ ಹಾಗೂ 12 ಅಡಿ ಎತ್ತರ ಇದೆ. ಇದಕ್ಕೆ ಎದುರಾಗಿ ಗಾತ್ರದಲ್ಲಿ ಚಿಕ್ಕದಾದ ಮತ್ತೊಂದು ವಿಗ್ರಹ ಅಲ್ಲಿಯೇ ಸಿಕ್ಕಿದೆ.
ಕೆಲ ದಿನಗಳಿಂದ ಇಲ್ಲಿ ನಂದಿ ವಿಗ್ರಹದ ಕೊಂಬುಗಳಷ್ಟೇ ಕಾಣುತ್ತಿದ್ದವು. ಇವುಗಳನ್ನು ಗ್ರಾಮಸ್ಥರು ಜೋಡಿ ಬಸವಣ್ಣನೆಂಬ ನಂಬಿಕೆಯಿಂದ ಪೂಜೆ ಮಾಡುತ್ತಿದ್ದರು.ಈ ನಂದಿ ವಿಗ್ರಹಗಳನ್ನು ನೋಡಲೇಬೇಕೆಂದು ಸಂಕಲ್ಪ ತೊಟ್ಟ ಜನರು, ಸ್ವಂತ ಹಣ ಸಂಗ್ರಹಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆಸಿದಾಗ ಬೃಹತ್ ನಂದಿ ವಿಗ್ರಹಗಳು ಸಿಕ್ಕಿವೆ. ಇದನ್ನು ಕಂಡ ಜನರು ದೇವರೆ ಪ್ರತ್ಯಕ್ಷವಾದಷ್ಟು ಸಂಭ್ರಮಪಟ್ಟಿದ್ದಾರೆ.
ರಾಜರ ಆಳ್ವಿಕೆ ಕಾಲದಲ್ಲಿ ನಾಗರಹೊಳೆ ಉದ್ಯಾನವನಕ್ಕೆ ಪ್ರಾಣಿಗಳ ಬೇಟೆಗೆ ಹೋಗುವಾಗ ಅರಸಿನಕೆರೆ ಗ್ರಾಮದಲ್ಲಿ ನಂದಿ ವಿಗ್ರಹವಿರುವ ವಿಷಯ ತಿಳಿದು, ವಿಗ್ರಹಗಳನ್ನು ಹೊರತೆಗೆಯಲು ರಾಜ ಚಾಮರಾಜೇಂದ್ರ ಒಡೆಯರ್ ಅವರು ಸಾರ್ವಜನಿಕರ ಮೂಲಕ ಪ್ರಯತ್ನಿಸಿದರಂತೆ. ಆದರೆ ಕೆರೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಕಾರ್ಯ ಫಲಿಸಲಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು.