ಮೈಸೂರು:ರಸ್ತೆ ಅಪಘಾತದಲ್ಲಿ ಇಬ್ಬರು ಗೆಳೆಯರು ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲೂಪುರ ಗ್ರಾಮದ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ನಂಜನಗೂಡಿನ ತಗಡೂರು ಗ್ರಾಮದ ಶಿವಮಲ್ಲೆಗೌಡ ಎಂಬವರ ಮಗ ಮಹೇಶ್ (24) ಮತ್ತು ಅದೇ ಗ್ರಾಮದ ನಾಗರಾಜು ಎಂಬವರ ಪುತ್ರ ಮಹೇಶ್ (23) ಮೃತರೆಂದು ತಿಳಿದುಬಂದಿದೆ.
ಯುವಕರಿಬ್ಬರೂ ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದರು. ಬೆಳಿಗ್ಗೆ ಕಾರ್ಖಾನೆ ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೋರ್ವ ಮಹೇಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.