ಮೈಸೂರು: ಕೆಆರ್ಎಸ್ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿರಂತ್ ಮತ್ತು ಸುನೀಲ್ (22) ಮೃತರು. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ಇರುವ ಅಣೆಕಟ್ಟಿನ ಹಿನ್ನೀರಿನಲ್ಲಿ ಈಜಲು ತೆರಳಿದ್ದರು ಎಂಬ ಮಾಹಿತಿ ದೊರೆತಿದೆ.
ಸ್ನೇಹಿತರಿಬ್ಬರು ಒಟ್ಟಿಗೆ ಈಜಲು ನೀರಿಗಿಳಿದ್ದಾರೆ. ಸುಮಾರು ಅರ್ಧ ಗಂಟೆ ಈಜಿದ ನಂತರ ಇಬ್ಬರೂ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಚಿರಂತ್ ಹಾಸನ ಮೂಲದವರಾಗಿದ್ದು ಹಾಗೂ ಸುನೀಲ್ ಬೀದರ್‌ನವರು. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸಿವಿನಿಂದ ಬಳಲಿ ಹೆಣ್ಣು ಹುಲಿ ಸಾವು: ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ ಬಿ.ಕುಪ್ಪೆ ವಲಯದ ಕಬಿನಿ- ತಡಿಕಿಹಳ್ಳ ಅರಣ್ಯ ಪ್ರದೇಶದಲ್ಲಿ 18 ತಿಂಗಳ ಹೆಣ್ಣು ಹುಲಿ ಜ್ವರ ಮತ್ತು ಹಸಿವಿನಿಂದ ಬಳಲಿ ಅಸುನೀಗಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಎಂದಿನಂತೆ ಗಸ್ತು ತಿರುಗುತ್ತಿದ್ದಾಗ ಕಳೇಬರ ಪತ್ತೆಯಾಗಿತ್ತು.
ಮೃತ ಹುಲಿಯ ಮೈ ಮೇಲೆ ಗಾಯಗಳಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಹುಲಿ ಮತ್ತೊಂದು ಹುಲಿಯ ಜೊತೆ ಕಾದಾಟದಲ್ಲಿ ಎಡಗಾಲಿನ ಮೂಳೆ ಮುರಿದಿರುವುದು ಕಂಡುಬಂದಿತ್ತು. ಮೂಳೆ ಮುರಿತದಿಂದ ಹುಲಿ ಆಹಾರವನ್ನು ಬೇಟೆಯಾಡಲು ಸಾಧ್ಯವಾಗದೇ ಜ್ವರ ಮತ್ತು ಹಸಿವಿನಿಂದ ಸಾವನ್ನಪ್ಪಿದೆ ಎಂದು ಪಶು ವೈದ್ಯಾಧಿಕಾರಿಗಳು ದೃಢಪಡಿಸಿರುವುದಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.