ಮೈಸೂರು: ಕವಲಂದೆಯನ್ನು ಛೋಟಾ ಪಾಕಿಸ್ತಾನ್ ಎಂದಿದ್ದ ಆಡಿಯೋ, ವಿಡಿಯೋ ವೈರಲ್ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಾಗಿದ್ದು, ವಿಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ಪ್ರಕರಣದ ಹಿನ್ನೆಲೆ: 'ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ' ಎಂಬ ಧ್ವನಿ ಹೊಂದಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ಎಸ್ಪಿ ಜೊತೆ ಮಾತುಕತೆ ನಡೆಸುತ್ತೇನೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.
ತಪ್ಪೊಪ್ಪಿಕೊಂಡ ಆರೋಪಿಗಳು:ವಿಡಿಯೋಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ವಿಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳ ಪೂರ್ವಪರದ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಪ್ರತಿಕ್ರಿಯೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೇ, ನಂಜನಗೂಡಿನ ಬಿಜೆಪಿ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಂಜನಗೂಡು ದೊಡ್ಡಕವಲಂದೆ ಠಾಣೆಯಲ್ಲಿ ದೂರು ನೀಡಿದ್ದರಲ್ಲದೆ, ಎಫ್ಐಆರ್ ದಾಖಲಾಗಿತ್ತು. ಎರಡು ದಿನಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಚೋಟಾ ಪಾಕಿಸ್ತಾನ್ ವಿಡಿಯೋ ವೈರಲ್: ಸಾಕ್ಷ್ಯ ಕಲೆಹಾಕುತ್ತಿರುವ ಪೊಲೀಸರು