ಕಲಬುರಗಿ: ಕೊರೊನಾ ಮಹಾಮಾರಿ ಎಲ್ಲಾ ವರ್ಗದ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಹೆತ್ತವರಿಗೆ ಬೇಡವಾಗಿ ಅನಾಥಾಲಯಕ್ಕೆ ಸೇರಿದ ಮಕ್ಕಳ ಬದುಕಿಗೂ ಕೊರೊನಾ ಪೆಟ್ಟು ನೀಡಿದೆ. ದಾನಿಗಳ ಸಹಾಯದಿಂದ ನಡೆಯುವ ಅನಾಥಾಶ್ರಮಗಳು ದಾನಿಗಳ ಕೊರತೆ ಉಂಟಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟಕಾಲ ಎದುರಿಸುತ್ತಿವೆ.
ಕಲಬುರಗಿ ಜಿಲ್ಲೆಯಲ್ಲಿ ವಿವೇಕಾನಂದ ಕುಷ್ಠ ಸೇವಾ ಸಮಿತಿ ಅಡಿಯಲ್ಲಿ ಉದನೂರ ಕ್ರಾಸ್ ಬಳಿ ಇರುವ ನಂದಗೋಕುಲ ಅನಾಥಾಶ್ರಮ ಹಾಗೂ ಗಾಣಗಾಪೂರದಲ್ಲಿ ದತ್ತ ಬಾಲ ಸೇವಾಶ್ರಮ, ಹೆತ್ತವರಿಗೆ ಬೇಡವಾಗಿ ಬೀದಿಗೆ ಬಿದ್ದ ಅನಾಥ ಕಂದಮ್ಮಗಳ ಜೀವನ ರೂಪಿಸುತ್ತಿವೆ. ಈ ಅನಾಥಾಶ್ರಮಗಳು ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸಿವೆ.
ಮಕ್ಕಳ ವಸತಿ, ಶಿಕ್ಷಣ, ಆರೋಗ್ಯ ಸೇರಿ ಪ್ರತಿಯೊಂದನ್ನು ಈ ಆಶ್ರಮಗಳು ನೋಡಿಕೊಂಡು ಮಕ್ಕಳ ಆರೈಕೆ ಮಾಡುತ್ತಿವೆ. ಸುಮಾರು 30 ವರ್ಷಗಳಿಂದ ನಡೆಯುತ್ತಿರುವ ನಂದಗೋಕುಲ ಯಾವುದೆ ಸರ್ಕಾರದ ಅನುದಾನ ಪಡೆಯದೇ, ದಾನಿಗಳು ನೀಡುವ ದಾನದಿಂದ ನೂರಾರು ಮಕ್ಕಳ ಜೀವನ ರೂಪಿಸಿವೆ. ಸದ್ಯ ಈ ಆಶ್ರಮದಲ್ಲಿ 18 ಹಾಗೂ ಗಾಣಗಾಪೂರ ಆಶ್ರಮದಲ್ಲಿ 58 ಜನ ಸೇರಿ ಒಟ್ಟು 76 ಅನಾಥ ಮಕ್ಕಳ ಆರೈಕೆ ಮಾಡಲಾಗುತ್ತಿದೆ. ಗಾಣಗಾಪೂರ ಆಶ್ರಮಕ್ಕೆ ಸರ್ಕಾರದಿಂದ ಅನುದಾನ ಬರುತ್ತದೆ.
ಕೋವಿಡ್ ತಡೆಯಲು ಸರ್ಕಾರ ಹೇರಿದ್ದ ಲಾಕಡೌನ್ ಹಿನ್ನಲೆ ದಿಢೀರ್ ಶಾಲಾ-ಕಾಲೇಜುಗಳು ಬಂದ್ ಆಗಿ ಮಕ್ಕಳು ಆಶ್ರಮದಲ್ಲಿ ಇರಬೇಕಾಯ್ತು. ಜನರ ಓಡಾಟ ಸ್ಥಗಿತವಾಗಿ ದಾನಿಗಳು ಬರುವುದು ನಿಂತು ಹೋಗಿತ್ತು. ಲಾಕ್‌ಡೌನ್ ಆರಂಭದ ಹದಿನೈದು ದಿನಗಳಲ್ಲಿ ದಾನಿಗಳು ನೀಡಿದ್ದ ದಿನಸಿ ಪದಾರ್ಥಗಳು ಖಾಲಿಯಾದವು. ಇದರಿಂದಾಗ ಆಶ್ರಮಕ್ಕೆ ಸಂಕಷ್ಟ ಎದುರಾಗಿತ್ತು. ದಾನಿಗಳಿಂದಲೇ ನಡೆಯುತ್ತಿರುವ ನಂದಗೋಕುಲ ಅನಾಥಶ್ರಮಕ್ಕೆ ಒಂದಿಷ್ಟು ಕಷ್ಟ ಎದುರಾಗಿತ್ತು. ಒಂದಡೆ ಲಾಕ್‌ಡೌನ್, ಮತ್ತೊಂದಡೆ ದಿನಸಿ ಸೇರಿ ಅಗತ್ಯ ವಸ್ತುಗಳು ಖಾಲಿಯಾಗಿ ದಿಕ್ಕು ತೋಚದಂತಾಗಿತ್ತು.