ಮೈಸೂರು : ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಆರ್.ಧ್ರುವನಾರಾಯಣ್ ಶ್ರದ್ಧಾಂಜಲಿ ಸಭೆಯಲ್ಲಿ ತಂದೆಯನ್ನು ಸ್ಮರಿಸಿ ಪುತ್ರ ದರ್ಶನ್ ಭಾವುಕರಾದ ಘಟನೆ ನಡೆಯಿತು. ಇಲ್ಲಿನ ನಂಜನಗೂಡು ವಿದ್ಯಾವರ್ಧಕ ಮೈದಾನದಲ್ಲಿ ಮಂಗಳವಾರ ನಡೆದ ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಹಿರಿಯರು ನಮ್ಮ ತಂದೆಯನ್ನು ಮುಂದೆ ನಡೆಸಿಕೊಂಡು ಬಂದಿದ್ದರು. ನಿಮ್ಮಲ್ಲಿ ನಾನು ನನ್ನ ತಂದೆಯನ್ನು ಕಾಣುತ್ತಿದ್ದೇನೆ. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಕೊಡಿ. ಈ ಮೂಲಕ ನನಗೆ ಆಶೀರ್ವಾದ ಮಾಡಿ" ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರು ಧ್ರುವನಾರಾಯಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಜೊತೆಗೆ ಮುಂಬರುವ ಚುನಾವಣೆಯಲ್ಲಿ ದರ್ಶನ್ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಧ್ರುವನಾರಾಯಣ್ ಸ್ನೇಹಿತರಾದ ಶ್ರೀಕಂಠ ಮಾತನಾಡಿ, ತಮ್ಮ ನಡುವಿನ ಒಡನಾಟ ಹಂಚಿಕೊಂಡರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, "ಆರ್. ಧ್ರುವನಾರಾಯಣ್ ಅವರು ಇಷ್ಟು ಬೇಗ ನಮ್ಮನ್ನು ಅಗಲಿ ಹೋಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ದೇವರು ಬಹಳ ಕ್ರೂರಿಯಾಗಿದ್ದಾನೆ. ಅವರ ಆದರ್ಶಗಳನ್ನು ಈಡೇರಿಸುವುದೇ ನಾವು ಅವರಿಗೆ ಸಲ್ಲಿಸುವ ನಮನ. ಧ್ರುವನಾರಾಯಣ. ಅವರು ಇಡೀ ಬದುಕನ್ನು ರಾಜಕಾರಣಕ್ಕೆ ಅರ್ಪಿಸಿಕೊಂಡಿದ್ದರು" ಎಂದು ಹೇಳಿದರು.
"ಶಾಸಕರಾಗಿ, ಸಂಸದರಾಗಿ ಜನಪರ ಕೆಲಸಗಳನ್ನು ಮಾಡಿದ್ದರು. ವೈಯಕ್ತಿಕ ಜೀವನಕ್ಕೆ ಹೆಚ್ಚು ಆದ್ಯತೆ ನೀಡಿರಲಿಲ್ಲ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಪ್ರಮುಖ ಕಾರಣ ಧ್ರುವನಾರಾಯಣ್. ಅವರು ಆದರ್ಶ ಲೋಕಸಭಾ ಸದಸ್ಯರಾಗಿದ್ದರು. ರಾಜಕಾರಣದಲ್ಲಿ ಕೆಲವೊಮ್ಮೆ ಕೆಲಸ ಮಾಡಿದವರೂ ಸೋಲುತ್ತಾರೆ, ಕೆಲಸ ಮಾಡದೇ ಇದ್ದವರೂ ಸೋಲುತ್ತಾರೆ. ಅವರ ಸೋಲಿನಿಂದ ಅವರಿಗೆ ನಷ್ಟ ಆಗಿಲ್ಲ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಷ್ಟವಾಗಿದೆ. ಇಡೀ ನಾಡಿಗೆ, ಜನರಿಗೆ ನಷ್ಟವಾಗಿದೆ" ಎಂದರು.