ಮೈಸೂರು: ಜಿಲ್ಲೆಯ ಗಿರಿಜನ ಹಾಡಿಗಳಲ್ಲೂ ಆದಿವಾಸಿಗಳು ಗ್ರಾಪಂ ಚುನಾವಣೆಯಲ್ಲಿ ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿದ್ದು, ಹಾಡಿಯ 95 ವರ್ಷದ ವೃದ್ಧೆಯಿಂದ ಸಹ ಮತ ಚಲಾವಣೆಯಾಗಿದೆ.
ಗ್ರಾಪಂ ಚುನಾವಣೆ: ಹಾಡಿಯ 95 ವರ್ಷದ ವೃದ್ಧೆಯಿಂದ ಮತದಾನ - ಆದಿವಾಸಿಗಳಿಂದ ಮತದಾನ ಸುದ್ದಿ
ಮೈಸೂರು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಹಾಡಿ ಹಾಗೂ ಆದಿವಾಸಿ ಜನರು ಉತ್ಸಾಹದಿಂದ ವೋಟಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ 95 ವರ್ಷದ ಅಜ್ಜಿಯೊಬ್ಬರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಗುಂಪುಗುಂಪಾಗಿ ಬಾರದಂತೆ ಪೊಲೀಸರಿಂದ ಎಚ್ಚರಿಕೆ:
ಮೈಸೂರು ಜಿಲ್ಲೆಯಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ. ಮತದಾರರಿಂದ ನೂರು ಮೀಟರ್ ದೂರದಲ್ಲಿ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದು, ಪೊಲೀಸರು ಭದ್ರತೆ ನೀಡುವುದರ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಮತಗಟ್ಟೆ ಕೇಂದ್ರಗಳ ಬಳಿ ಗುಂಪು ಗುಂಪಾಗಿ ಸೇರುತ್ತಿರುವ ಜನರಿಗೆ ಪೊಲೀಸರು ವಾರ್ನಿಂಗ್ ಮಾಡುತ್ತಿದ್ದಾರೆ.
ಕೊರೊನಾ ಮುನ್ನೆಚ್ಚರಿಕೆ ಕ್ರಮ ಮತ್ತು ಚುನಾವಣಾ ನಿಯಮ ಪಾಲಿಸದಿದ್ದರೆ ಕೇಸ್ ಹಾಕಲಾಗುತ್ತದೆ ಎಂದು ಮತದಾರರಿಗೆ ಹಾಗೂ ಮತಯಾಚಿಸುವ ಅಭ್ಯರ್ಥಿಗಳಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಸರಗೂರು, ಕೆ.ಆರ್.ನಗರ ತಾಲೂಕುಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.