ಮೈಸೂರು:ಭಾರತೀಯ ರೈಲ್ವೆಯ ಮಹತ್ವದ ಯೋಜನೆ 'ಹಂಗ್ರಿ ಫಾರ್ ಕಾರ್ಗೋ' ಉಪಕ್ರಮದಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಸರಕು ಸಾಗಣೆಯಲ್ಲಿ ಮತ್ತೊಮ್ಮೆ ದಾಖಲೆ ನಿರ್ಮಿಸಿದೆ. ಆರ್ಥಿಕ ವರ್ಷ 2023 ರಲ್ಲಿ (ಮಾರ್ಚ್ 28, 2023 ರವರೆಗೆ) ಮೈಸೂರು ವಿಭಾಗದಿಂದ ಸರಕು ಸಾಗಣೆ 9,378 ಮಿಲಿಯನ್ ಟನ್‌ಗಳಿಗೆ ತಲುಪಿದೆ. 2023ರ 27ನೇ ಮಾರ್ಚ್ ತನಕ 877 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ. ಸರಕು ಸಾಗಣೆ ಆದಾಯವನ್ನು ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ ಇದು ಅತ್ಯಧಿಕ.
2021-22ರಲ್ಲಿ ಒಟ್ಟು ಸರಕು ಸಾಗಣೆಯಿಂದ ಗಳಿಸಿದ ಆದಾಯಕ್ಕಿಂತ ಶೇ. 27.43 ರಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ ನೈಋತ್ಯ ರೈಲ್ವೆ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿಗಿಂತ ಶೇ. 18.52 ಹೆಚ್ಚು ಆದಾಯ ಬಂದಿದೆ. ಪ್ರಸಕ್ತ ವರ್ಷದಲ್ಲಿ ಸರಕು ಸಾಗಣೆಗೆ ಆದಾಯ ನಿಗದಿಪಡಿಸಿದ್ದ 739.99 ಕೋಟಿ ರೂಪಾಯಿಗಳನ್ನು 329 ದಿನಗಳಲ್ಲೇ ತಲುಪಲಾಗಿದೆ.
ಆರ್ಥಿಕ ವರ್ಷ 2021-22 ರ ಸಾಗಣೆಗೆ ಹೋಲಿಸಿದರೆ ಸರಕು ಸಾಗಣೆ ಆದಾಯದಲ್ಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಗಮನಾರ್ಹ ಸಾಧನೆ ಕಂಡಿದೆ. ವಲಯದ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿ ಮುಟ್ಟುವಲ್ಲಿ ಮೈಸೂರು ರೈಲ್ವೆ ವಿಭಾಗ ಯಶಸ್ವಿಯಾಗಿದೆ. ಆರ್ಥಿಕ ವರ್ಷ 2022-23 ಕ್ಕೆ ವಿಭಾಗಕ್ಕೆ ನಿಗದಿಪಡಿಸಿದ ಗುರಿಯನ್ನು ಕೇವಲ 329 ದಿನಗಳಲ್ಲಿ ತಲುಪಿದ್ದು, ಹೊಸ ಮೈಲಿಗಲ್ಲಿಗೆ ನಾಂದಿ ಹಾಡಿದೆ.
9,230 ಮಿಲಿಯನ್ ಟನ್ಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿ 9,378 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ. ಇದು ಮೈಸೂರು ವಿಭಾಗದ ಮೂಲದಿಂದ ಹೊರಟ ಸರಕು ಸಾಗಣೆ ಆಗಿದೆ. ಸರಕು ಸಾಗಣೆಯಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮೂಲಗಳಾಗಿರುವ ಹೊಸ ಸರಕುಗಳ ಸಾಗಣೆಯನ್ನು ಸುಧಾರಿಸಲು ವಿಭಾಗವು ಗಮನ ಕೇಂದ್ರೀಕರಿಸಿದೆ.
ಪೆಟ್ರೋಲಿಯಂ ಉತ್ಪನ್ನ ಸಾಗಣೆಯಿಂದ ಆದಾಯವು 2022 ರಲ್ಲಿ ರೂ.122 ಕೋಟಿಗಳಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 185 ಕೋಟಿ ರೂಗೆ ತಲುಪಿದೆ. ಇತರ ಸರಕು ಆಹಾರ ಧಾನ್ಯ, ಸಕ್ಕರೆ, ಸಿಮೆಂಟ್ ಮತ್ತು ದ್ವಿಚಕ್ರ ವಾಹನಗಳು ಸಾಗಣೆಯಲ್ಲೂ ಏರಿಕೆಯಾಗಿದೆ.