ಮೈಸೂರು:ತೃತೀಯ ಲಿಂಗಿಗಳು ಏಕೆ ವಿಶಿಷ್ಠವಾಗಿ ಚಪ್ಪಾಳೆ ಹೊಡೆಯತ್ತಾರೆ ಹಾಗೂ ಹೆಣ್ಣಿನ ರೀತಿ ಏಕೆ ಶೃಂಗಾರ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮೈಸೂರು ಜಿಲ್ಲೆಯ ತೃತೀಯ ಲಿಂಗಿ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ಇಂದು ವಿಶ್ವ ತೃತೀಯ ಲಿಂಗಿಗಳ ದಿನದ ಹಿನ್ನೆಲೆಯಲ್ಲಿ ಅವರ ವಿಶೇಷ ಸಂದರ್ಶನ ಇಲ್ಲಿದೆ.
ಇಂದು ಇಲ್ಲಿ ವಿಶ್ವ ತೃತೀಯ ಲಿಂಗಿಗಳ ದಿನದ ಆಚರಣೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ತೃತೀಯ ಲಿಂಗಿಗಳೇ ಅಭಿನಯಿಸಿರುವ ಶಿವಲೀಲಾ ಎಂಬ ಚಿತ್ರ ಇಂದು ಬಿಡುಗಡೆ ಆಗುತ್ತಿದ್ದು, ತುಂಬಾ ಸಂತೋಷವನ್ನು ಉಂಟು ಮಾಡಿದೆ ಎಂದು ಮೈಸೂರು ಜಿಲ್ಲೆಯ ತೃತೀಯ ಲಿಂಗಿಗಳ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಈಟಿವಿ ಭಾರತ್ ಗೆ ಸಂದರ್ಶನದಲ್ಲಿ ತಿಳಿಸಿದರು.
ಏಕೆ ಹೆಣ್ಣಿನ ರೀತಿ ಶೃಂಗಾರ ಮಾಡಿಕೊಳ್ಳುತ್ತಾರೆ :ಸಾಮಾನ್ಯವಾಗಿ ತೃತೀಯ ಲಿಂಗಿಗಳು ಸರ್ಕಲ್ಗಳಲ್ಲಿ ಹಾಗೂ ಅಂಗಡಿಗಳಲ್ಲಿ ಹಣ ಕೇಳುವಾಗ ವಿಶಿಷ್ಠವಾಗಿ ಚಪ್ಪಾಳೆ ಹೊಡೆಯುತ್ತಾರೆ. ಈ ರೀತಿ ತೃತೀಯ ಲಿಂಗಿಗಳು ಹೊಡೆಯುವ ಚಪ್ಪಾಳೆಗೂ, ಸಾಮಾನ್ಯ ಜನ ಹೊಡೆಯುವ ಚಪ್ಪಾಳೆಗೂ ಬಹಳ ವ್ಯತ್ಯಾಸ ಇದೆ. ನಮಗೆ ಚಪ್ಪಾಳೆ ಹೊಡೆಯುವುದು ತಲಾತಲಾಂತರದಿಂದ ಬಂದ ಒಂದು ಪದ್ಧತಿ ಆಗಿದೆ. ತೃತೀಯ ಲಿಂಗಿಗಳೇ ಎನ್ನವುದಕ್ಕೆ ಚಪ್ಪಾಳೆ ಒಂದು ಸಂಕೇತ ಎನ್ನುತ್ತಾರೆ ಪ್ರಣತಿ ಪ್ರಕಾಶ್. ಜೊತೆಗೆ ನಾವು ಹುಟ್ಟುವಾಗ ಗಂಡಾಗಿ ಹುಟ್ಟುತ್ತೇವೆ, ಬೆಳೆಯುತ್ತ ದೈಹಿಕ ಬದಲಾವಣೆಗಳಿಂದ ನಾವು ಹೆಣ್ಣಾಗಿ ಬದಲಾಗುತ್ತೇವೆ, ಆದ್ದರಿಂದ ಹೆಣ್ಣಿನ ರೀತಿ ಬಟ್ಟೆಗಳನ್ನು ಹಾಕಿಕೊಂಡು ಭಿಕ್ಷೆ ಬೇಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಪ್ರಣತಿ ಪ್ರಕಾಶ್ ತಿಳಿಸಿದರು.