ಮೈಸೂರು: ಈ ವಾರ ಮೂರು ದಿನ ರಜೆ ಇರುವುದರಿಂದ ಸಾಂಸ್ಕೃತಿಕ ನಗರಿಯ ಪ್ರಮುಖ ಆಕರ್ಷಣೀಯ ಸ್ಥಳವಾದ ಚಾಮುಂಡೇಶ್ವರಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ.
ಸಾಲು ಸಾಲು ರಜೆ, ಚಾಮುಂಡಿ ಬೆಟ್ಟಕ್ಕೆ ಹರಿದು ಬಂತು ಜನಸಾಗರ!
ದೀಪಾವಳಿ ಮತ್ತು ರಾಜ್ಯೋತ್ಸವ ರಜೆ ಎಂಜಾಯ್ ಮಾಡಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
ಭಾನುವಾರ ನರಕ ಚತುದರ್ಶಿ, ಮಂಗಳವಾರ ದೀಪಾವಳಿ, ಶುಕ್ರವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಜೆ ಇದೆ. ಈ ಕಾರಣ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಟ್ಟಿರುವ ಪ್ರವಾಸಿಗರು, ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಆಷಾಢ ಮಾಸದ ನಾಲ್ಕು ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ, ಚಾಮುಂಡೇಶ್ವರಿ ಮಹಾರಥೋತ್ಸವ ದಿನ ಜನಸಾಗರ ಹರಿದು ಬರುವಂತೆ, ಈ ತಿಂಗಳಲ್ಲೂ ಬೆಟ್ಟಕ್ಕೆ ಭಕ್ತರ ಸಂಖ್ಯೆ ಹೆಚ್ಚಿದೆ.
ಇನ್ನು ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಕಾರಣ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ, ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.