ಮೈಸೂರು :ದೆಹಲಿಯ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ನಡೆಸಲಾದ 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ಶೈಕ್ಷಣಿಕ ಚಟುವಟಿಕೆಗಳ ಆಧಾರದ ಮೇಲೆ ಮೌಲ್ಯಮಾಪನ ವರದಿಯನ್ನ 23/01/2022ರಂದು ಪ್ರಕಟಿಸಿದೆ. ಕೆಎಸ್ಒಯುಗೆ ಸಮೀಕ್ಷೆಯಲ್ಲಿ ಉತ್ತಮ ಗ್ರೇಡ್ ಲಭಿಸಿದೆ. ಈ ಬಗ್ಗೆ ಆಗಿನ ಅವಧಿಯ ಕುಲಪತಿಯಾದ ಡಿ. ಶಿವಲಿಂಗಯ್ಯ ಅವರು ಸಂತೋಷ ವ್ಯಕ್ತಪಡಿಸಿದ್ದು, ಇದು ವಿವಿಗೆ ಸಂದ ಗೌರವ ಎಂದು ಹೇಳಿದ್ದಾರೆ.
KSOUಗೆ ಯುಜಿಸಿಯಿಂದ ಉನ್ನತ ಶ್ರೇಣಿ.. ಈ ಬಗ್ಗೆ ಈಟಿವಿ ಭಾರತ ಜತೆ ವಿಶ್ರಾಂತ ಕುಲಪತಿ ಡಿ ಶಿವಲಿಂಗಯ್ಯ ಪ್ರತಿಕ್ರಿಯೆ ನೀಡಿರುವುದು.. ಈ ಕುರಿತು ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಅವರು, ದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ನಡೆಸಲಾದ 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ಶೈಕ್ಷಣಿಕ ಚಟುವಟಿಕೆಗಳ ಆಧಾರದ ಮೇಲೆ ಮೌಲ್ಯಮಾಪನ ವರದಿಯನ್ನ 23/01/2022 ರಂದು ಪ್ರಕಟಿಸಲಾಗಿದೆ.
ಕರಾಮುವಿಗೆ ಒಟ್ಟು 400 ಅಂಕಗಳಿಗೆ 300 ಅಂಕ ಬಂದಿದೆ. ಸಮೀಕ್ಷೆಯಲ್ಲಿ ಉತ್ತಮ ಗ್ರೇಡ್ ಲಭಿಸಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಇದು ಕೇವಲ ಕುಲಪತಿಯವರಿಂದ ಆಗುವಂತಹ ಕೆಲಸವಲ್ಲ. ಆಗಿನ ಅವಧಿಯಲ್ಲಿ ಕೆಲಸ ಮಾಡಿದ ಸಿಬ್ಬಂದಿ, ಅಧಿಕಾರಿಗಳು ಹೀಗೆ ಎಲ್ಲರ ಸಹಾಯ, ಸಹಕಾರದಿಂದ ಒಳ್ಳೆಯ ಗ್ರೇಡ್ ಬಂದಿದೆ. ಹಾಗಾಗಿ, ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕೆಎಸ್ಒಯು 1996ರಲ್ಲಿ ಪ್ರಾರಂಭವಾಯಿತು. 23 ವರ್ಷಗಳ ನಂತರ ನಾನು 7ನೇ ಕುಲಪತಿಯಾಗಿ ಅಧಿಕಾರಿ ವಹಿಸಿಕೊಂಡೆ. ನಾನು 3 ವರ್ಷಗಳ ಕಾಲ ಅಧಿಕಾರ ನಡೆಸಿದ್ದೇನೆ, ಮೊದಲ ಎರಡು ವರ್ಷಗಳು ಕೆಎಸ್ಒಯುಗೆ ತರುವುದರಲ್ಲೇ ಕಳೆದುಹೋಯಿತು. ನೂರಾರು ಕೇಸ್ಗಳು ಕೋರ್ಟ್‌ನಲ್ಲಿ ಇದ್ದವು. ಸಾವಿರಾರು ಪುಟಗಳ ದಾಖಲೆಯನ್ನು ಯುಜಿಸಿಗೆ ಸಲ್ಲಿಸಲಾಗಿತ್ತು ಎಂದರು.
ಅಂದು ಸಹಕಾರ ನೀಡಿದ ಅನಂತಕುಮಾರ್, ರಾಮದಾಸ್, ಜಿ.ಟಿ.ದೇವೇಗೌಡ ಹಾಗೂ ಪ್ರತಾಪ್ ಸಿಂಹ, ವಿವಿಯ ಸಿಬ್ಬಂದಿ, ಎಬಿವಿಪಿ ಸಂಘಟನೆ ಅಧಿಕಾರಿಗಳು, ರಾಜ್ಯಪಾಲರು, ಹೀಗೆ ಎಲ್ಲರ ಸಹಕಾರದಿಂದ ಒಳ್ಳೆಯ ಗ್ರೇಡ್ ದೊರಕಿದೆ ಎಂದರು.
ಅಧಿಕಾರದ ಅವಧಿಯಲ್ಲಿ ಯುಜಿಸಿಯ ನಿಯಮದ ಪ್ರಕಾರ 7 ಪ್ರೊಫೆಸರ್, 23 ಅಸೋಸಿಯೇಟ್‌ಗಳನ್ನು ಸರ್ಕಾರದ ಅನುಮತಿ ಪಡೆದು ನೇಮಕ ಮಾಡಿಕೊಳ್ಳಲಾಗಿದೆ. ಇದಕ್ಕೆ ಯುಜಿಸಿಯಿಂದ 20 ಅಂಕ ಲಭಿಸಿದೆ. ಜೊತೆಗೆ ಎರಡು ಆನ್‌ಲೈನ್ ಅಡ್ಮಿಷನ್ ಮಾಡಿದ್ದೇನೆ, 3ನೇ ಅಡ್ಮಿಷನ್ಗೆ ಜಾಹೀರಾತು ನೀಡಲಾಗಿತ್ತು, ಹೀಗೆ ಎಲ್ಲವನ್ನು ಯುಜಿಸಿ ನಿಯಮದ ಪ್ರಕಾರ ಮಾಡಿದ್ದೇವೆ. ಹಾಗಾಗಿ, ಒಳ್ಳೆಯ ಗ್ರೇಡ್ ಬಂದಿದೆ ಎಂದರು.
ಕೆಎಸ್ಒಯುನಲ್ಲಿ ಆ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಇದ್ದವು. ಒಂದು ಕಾಲದಲ್ಲಿ ಯುಜಿಸಿಯವರು ನನ್ನನ್ನ ಕ್ಲರ್ಕ್ ರೀತಿ ನೋಡಿದ್ದಾರೆ. ಈಗ ಅದೇ ಯುಜಿಸಿ ನಮ್ಮ ಕೆಲಸ ಗುರುತಿಸಿ ಒಳ್ಳೆಯ ಗ್ರೇಡ್ ನೀಡಿದ್ದಾರೆ. ಇದು ಖುಷಿಯ ವಿಚಾರ, ಇದು ವಿವಿಗೆ ಸಂದ ಗೌರವ. ಇದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ, ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಾರೆ.
ಕುಲಪತಿಯವರು ವಿವಿಗೆ ನಾಯಕ ಇದ್ದ ಹಾಗೆ. ಸಿಬ್ಬಂದಿ, ಅಧಿಕಾರಿಗಳ ಸಹಾಯವಿಲ್ಲದೆ ಈ ರೀತಿ ಗ್ರೇಡ್ ಬರಲು ಸಾಧ್ಯವಿಲ್ಲ. ಹಾಗಾಗಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇನ್ನೂ ಕೆಎಸ್ಒಯು ನೇಮಕಾತಿಯ ಗೊಂದಲಗಳ ಬಗ್ಗೆ ಮಾತನಾಡಿ, ನಾನು ಈಗ ನಿವೃತ್ತಿಯಾಗಿ ಮಂಗಳೂರಿನಲ್ಲಿ ಇದ್ದೇನೆ. ಇದರ ಬಗ್ಗೆ ವಿಷಯ ತಿಳಿಯದೆ ಸುಮ್ಮನೆ ಮಾತನಾಡುವುದು ತಪ್ಪು ಎಂದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ