ಮೈಸೂರು: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ವಿಶ್ವನಾಥ್ ನಿನ್ನೆ ರಾತ್ರಿ ಮೈಸೂರಿಗೆ ಬಂದಿದ್ದು, ನಾಳೆ ಬೆಳಗ್ಗೆ 10:30ಕ್ಕೆ ಮೈಸೂರಿನ ಪತ್ರಿಕಾ ಭವನದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಹೆಚ್. ವಿಶ್ವನಾಥ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದ ನಂತರ ಅನರ್ಹಗೊಂಡು ಜೆಡಿಎಸ್ ಪಕ್ಷದಿಂದಲೂ ಉಚ್ಚಾಟನೆಗೊಂಡಿದ್ದಾರೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ವಿಶ್ವನಾಥ್, ತಾನು ಜೆಡಿಎಸ್ ಪಕ್ಷವನ್ನು ಬಿಡಲು ಕಾರಣ ಏನು? ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಅಂಶಗಳೇನು? ಎಂಬುದರ ಬಗ್ಗೆ ನಾಳಿನ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡೋದಾಗಿ ಹೇಳಿದ್ದಾರೆ.