ಮೈಸೂರು: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ರೋಗಿಗಳು ಟೋಕನ್ ಪಡೆಯಲು ಹರಸಾಹಸ ಪಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಕ್ಯೂಗೆ ಬ್ರೇಕ್ ಹಾಕಿ, ರೋಗಿಗಳಿಗೆ ಆನುಕೂಲವಾಗುವಂತೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸ್ಮಾರ್ಟ್ ಟೋಕನ್ ವ್ಯವಸ್ಥೆ ಪರಿಚಯಿಸಲಾಗಿದೆ. ಇದು ಗಂಟೆಗಟ್ಟಲೆ ರೋಗಿಗಳು ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ. ಆ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡ ಕ್ಯೂ ಇಲ್ಲದೇ, ಫೋನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಸುಲಭವಾಗಿ ರೋಗಿಗಳು ಟೋಕನ್ ಪಡೆಯಲು ನೆರವಾಗುತ್ತದೆ. ಹಾಗಾದರೆ ಯಾವ ರೀತಿ ಸ್ಮಾರ್ಟ್ ಟೋಕನ್ಅನ್ನು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ..
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕ್ಯೂನಲ್ಲಿ ನಿಲ್ಲುವುದೇ ರೋಗಿಗಳಿಗೆ ಕಷ್ಟದ ಕೆಲಸ. ಈ ಸಮಸ್ಯೆಗೆ ಮೈಸೂರಿನ ಜಿಲ್ಲಾಸ್ಪತ್ರೆ ಸ್ಮಾರ್ಟ್ ಉಪಾಯ ಹುಡುಕಿದೆ. ಇದರಿಂದ ಪ್ರತಿನಿತ್ಯ ನೂರಾರು ಹಳ್ಳಿಗಳಿಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಇದು ಅನುಕೂಲವಾಗಲಿದೆ. ಇದರಿಂದ ಆಸ್ಪತ್ರೆ ಸಿಬ್ಬಂದಿಗಳು ಪ್ರತಿದಿನ ಒಬ್ಬೊಬ್ಬ ರೋಗಿಗೂ ಅವರ ಸಂಪೂರ್ಣ ವಿಳಾಸವನ್ನು ದಾಖಲಿಸಿಕೊಂಡು. ಅವರಿಗೆ ಟೋಕನ್ ನೀಡುವ ವ್ಯವಸ್ಥೆಯಿಂದ ಮುಕ್ತಿ ದೊರಕಿದೆ. ಇದು ಫಾಸ್ಟ್ ಟ್ರ್ಯಾಕ್ ಒಪಿಡಿ ವ್ಯವಸ್ಥೆ ಆಗಿದೆ.
ಫಾಸ್ಟ್ ಟ್ರ್ಯಾಕ್ ಒಪಿಡಿ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?:ಮುಂಬೈ ಮೂಲದ ಡ್ರಿಫ್ಕೇಸ್ ಸಂಸ್ಥೆಯು ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ, ಕ್ಯೂಆರ್ ಕೋಡ್ ಸ್ಕ್ಯಾನ್ ಆಧಾರಿತ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆಯಡಿ, ಆ್ಯಪ್ವೊಂದನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಸ್ಕ್ಯಾನರ್ ಮೂಲಕ ಆಸ್ಪತ್ರೆಯ ಮುಂಭಾಗ ಇರುವ ಕ್ಯೂಆರ್ ಕೋಡ್ಅನ್ನು ಸ್ಕ್ಯಾನ್ ಮಾಡಿದರೆ, ರೋಗಿಯ ಹೆಸರು, ವಿಳಾಸ, ವಯಸ್ಸು ಎಲ್ಲವೂ ದಾಖಲಾಗುತ್ತದೆ. ಬಳಿಕ ಮೊಬೈಲ್ಗೆ ಒಟಿಪಿ ಬರಲಿದ್ದು, ಅದನ್ನು ಆಸ್ಪತ್ರೆಯ ಒಪಿಡಿ ಕೌಂಟರ್ನಲ್ಲಿ ಹೇಳಿದರೆ ವೈದ್ಯರ ಭೇಟಿಗೆ ಟೋಕನ್ ಸಿಗಲಿದೆ. ಹೀಗೆ ಸ್ಕ್ಯಾನ್ ಮಾಡುವ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ಗೆ ಲಿಂಕ್ ಆಗಿರಬೇಕು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಅಮರನಾಥ್ ಮಾತನಾಡಿ, ರೋಗಿಗಳು ಫಾಸ್ಟ್ ಟ್ರ್ಯಾಕ್ ಒಪಿಡಿ ವ್ಯವಸ್ಥೆ ಮೂಲಕ ಟೋಕನ್ ಪಡೆದ ಬಳಿಕ ಹಾಲ್ನಲ್ಲಿ ಅಳವಡಿಸಿರುವ ಟಿವಿಯಲ್ಲಿ ಇವರ ಟೋಕನ್ ನಂಬರ್ ಬಂದ ನಂತರ ವೈದ್ಯರ ಬಳಿ ಪರೀಕ್ಷೆಗೆ ಹೋಗಬಹುದು. ಈ ಫಾಸ್ಟ್ ಟ್ರ್ಯಾಕ್ ಟೋಕನ್ ವ್ಯವಸ್ಥೆಯಿಂದ ರೋಗಿಗಳು ಕ್ಯೂನಲ್ಲಿ ನಿಲ್ಲುವುದು ತಪ್ಪುತ್ತದೆ. ಆನಂತರ ಟೋಕನ್ ಬರೆಯುವ ಸ್ಥಳದಲ್ಲಿ ಹೋಗಿ ತನ್ನ ಸಂಪೂರ್ಣ ಮಾಹಿತಿ ದಾಖಲಿಸುವ ಸಮಯ ಉಳಿಯಲಿದೆ. ರೋಗಿಗಳಿಗೆ ಸುಲಭವಾಗಿ ಟೋಕನ್ ಸಿಕ್ಕಿ ತಮ್ಮ ಸರತಿ ಬಂದಾಗ ನೇರವಾಗಿ ವೈದ್ಯರ ಬಳಿ ತೆರಳಬಹುದಾಗಿದೆ. ಈ ವ್ಯವಸ್ಥೆ ರೋಗಿಗಳಿಗೆ ಅನುಕೂಲವಾಗಿದೆ. ಜೊತೆಗೆ ಈ ಆ್ಯಪ್ನಲ್ಲಿ ಸಂಪೂರ್ಣ ಮಾಹಿತಿ ಶೇಖರಣೆಯಾಗುತ್ತದೆ. ಜೊತೆಗೆ ಮುಂದೆ ಮತ್ತೇ ಪರೀಕ್ಷೆಗೆ ಬರುವಾಗ ಚೀಟಿಗಳನ್ನು ತರುವುದು ತಪ್ಪುತ್ತದೆ. ಇದರ ಜೊತೆಗೆ ವೈದ್ಯರಿಗೆ ದಾಖಲಾತಿಗಳನ್ನು ಆ್ಯಪ್ನಲ್ಲಿ ಇಟ್ಟುಕೊಳ್ಳುವುದರಿಂದ ಚಿಕಿತ್ಸೆಗೂ ಸಹ ಅನುಕೂಲವಾಗುತ್ತದೆ ಎಂದು ವಿವರಿಸಿದರು.