ಮೈಸೂರು:ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತೋಷ. ಅದೇ ರೀತಿಯಾಗಿ ಸಂಸತ್ತಿನ ಮುಂದೆ ಟಿಪ್ಪು ಸುಲ್ತಾನ್ ಪ್ರತಿಮೆ ನಿಲ್ಲಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ರೈಲಿಗೆ ಟಿಪ್ಪು ಹೆಸರು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ನಗರದ ಹಾರ್ಡಿಂಗ್ ವೃತ್ತದ ಬಳಿ ಏಕಾಂಗಿಯಾಗಿ ಪ್ರತಿಭಟಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮೊದಲ ಬಾರಿಗೆ ಟಿಪ್ಪು ಸುಲ್ತಾನ್ ಜಯಂತಿ ಮಾಡಿದವರೇ ನಾವು. ಟಿಪ್ಪುವಿನ ಇತಿಹಾಸವನ್ನು ತಿರುಚುವ ಕೆಲಸವನ್ನು ಬಿಜೆಪಿ ಮತ್ತು ಆರ್ಎಸ್ಎಸ್ನವರು ಮಾಡುತ್ತಿದ್ದಾರೆ. ಟಿಪ್ಪುವಿನ ಇತಿಹಾಸ ತಿಳಿಯಬೇಕಾದರೆ ಕನ್ನಂಬಾಡಿ ಕಟ್ಟೆಯ ಪಕ್ಕದಲ್ಲಿ ಕನ್ನಡದಲ್ಲಿ ಒಂದು ವಾಕ್ಯ ಬರೆದಿದೆ. ಅದನ್ನು ಓದಿ ಬಿಜೆಪಿ ಮತ್ತು ಆರ್ಎಸ್ಎಸ್ನವರು ಅರ್ಥ ಮಾಡಿಕೊಳ್ಳಲಿ ಎಂದರು.
ಟಿಪ್ಪುವಿನ ಐದು ಅಡಿ ಪ್ರತಿಮೆ ಮಾಡಲು ಬಿಡುವುದಿಲ್ಲ ಎಂದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆಗೆ ತಿರುಗೇಟು ನೀಡಿದ ವಾಟಾಳ್ ನಾಗರಾಜ್, ಪ್ರಮೋದ್ ಮುತಾಲಿಕ್ ಒಬ್ಬ ಹುಚ್ಚ. ಅವನ ಮಾತನ್ನು ಕೇಳುತ್ತಿದ್ದರೆ ನಮಗೂ ಹುಚ್ಚು ಹಿಡಿಯುತ್ತದೆ. ಪ್ರಮೋದ್ ಮುತಾಲಿಕ್ ಇದೇ ರೀತಿ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಣೆ ಮಾಡಬಾರದು ಎಂದು ಹೇಳಿ ನನಗೆ ಕರೆ ಮಾಡಿದ್ದ. ನಿನಗೂ ಸಂಸಾರ ಮಕ್ಕಳು ಅಂತ ಇದ್ದಿದ್ರೆ ಅದರ ಸಂಬಂಧ, ಬೆಲೆ ಗೊತ್ತಾಗುತ್ತಿತ್ತು ಎಂದು ಬೈದಿದ್ದೆ ಎಂದು ಏಕವನಚನದಲ್ಲೇ ವಾಗ್ದಾಳಿ ನಡೆಸಿದರು.