ಮೈಸೂರು : ಕೊಲೆ ಪ್ರಕರಣವೊಂದರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದು ಬಳಿಕ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದ ಬೆಂಗಳೂರಿನ ಸ್ಮೈಲ್ ನವೀನ್ ಎಂಬಾತನನ್ನು ಮೈಸೂರಿನಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ನಂಜನಗೂಡು ಪೊಲೀಸರು 8 ಜನ ಆರೋಪಿಗಳನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಆ. 27 ರ ರಾತ್ರಿ ಮೈಸೂರಿನ ಅರಮನೆಯ ಮುಂಭಾಗ ಇರುವ ವರಾಹ ಗೇಟ್ ಬಳಿ ಯುವತಿಯರೊಂದಿಗೆ ರೀಲ್ಸ್ ಮಾಡುತ್ತಿದ್ದಾಗಲೇ ನವೀನ್ನನ್ನು ಎರಡು ಕಾರುಗಳಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ಕಾರಿನಲ್ಲೇ ಕೊಲೆ ಮಾಡಿ ಶವವನ್ನು ನಂಜನಗೂಡಿನ ಗೋಳೂರು ಬಳಿಯ ನಾಲೆಗೆ ಬಿಸಾಕಿ ಪರಾರಿಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ಎಂದು ದಾಖಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಹತ್ಯೆಯ ರಿವೆಂಜ್ಗಾಗಿ ನವೀನ್ ಕೊಲೆ ಶಂಕೆ : ಬಿಬಿಎಂಪಿಯ ಕಾರ್ಪೊರೇಟರ್ವೊಬ್ಬರ ಅಣ್ಣನ ಮಗನನ್ನು 2020 ರ ಜುಲೈನಲ್ಲಿ 13 ಜನರ ತಂಡ ಕಗ್ಗಲಿಪುರ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ನಾಲ್ವರು ಸ್ನೇಹಿತರೊಂದಿಗೆ ಸ್ಮೈಲ್ ನವೀನ್ ಪೊಲೀಸರಿಗೆ ಶರಣಾಗಿದ್ದ. ಬಳಿಕ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದು, ಟಿಕ್ ಟಾಕ್ ಹಾಗೂ ರೀಲ್ಸ್ ಗಳಿಂದ ಜಾಲತಾಣಗಳಲ್ಲಿ ಫೇಮಸ್ ಆಗಿದ್ದ. ಇದೀಗ ಈ ಕೊಲೆ ನಡೆದಿರುವುದು ರಿವೆಂಜ್ಗಾಗಿ ಎಂಬುದನ್ನು ಪೊಲೀಸರ ತನಿಖೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.