ಮೈಸೂರು: ನಿನ್ನೆ ಸಂಸತ್ನಲ್ಲಿ ಆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ಸಂಸದ ಪ್ರತಾಪ್ ಸಿಂಹ ಅವರಿಂದ ವೀಕ್ಷಕರ ಪಾಸ್ ಪಡೆದು ಹೋಗಿದ್ದರು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಸಿಂಹ ಅವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಸದರ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬುಧವಾರ ಸಂಸತ್ನ ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ಅದರಲ್ಲಿ ಒಬ್ಬ ಮನೋರಂಜನ್ ಎಂಬ ಯುವಕ ಮೈಸೂರಿನ ವಿಜಯನಗರ ಎರಡನೇ ಹಂತದ ನಿವಾಸಿಯಾಗಿದ್ದಾನೆ. ಈತ ಸಂಸತ್ ಕಲಾಪ ವೀಕ್ಷಣೆ ಮಾಡಲು ಸಂಸದ ಪ್ರತಾಪ್ ಸಿಂಹ ಅವರ ಕಡೆಯಿಂದ ಪಾಸ್ ಪಡೆದು ಹೋಗಿದ್ದ ಎಂಬ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಕಛೇರಿ ಇರುವ ಜಲದರ್ಶಿನಿ ಅತಿಥಿ ಗೃಹದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾಗ್ರತಾ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮೀಸಲು ಪಡೆಯ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹದ ಒಳಗಿರುವ ಸಂಸದರ ಕಛೇರಿ ಮುಂಭಾಗದಲ್ಲಿ ಸ್ಥಳೀಯ ದೇವರಾಜ ಪೊಲೀಸ್ ಠಾಣೆಯ ವತಿಯಿಂದ ಬ್ಯಾರಿಕೇಡ್ ಹಾಕಲಾಗಿದೆ. ಕಚೇರಿಗೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.